ಕೊರಿಯಾ ಓಪನ್ ಬ್ಯಾಡ್ಮಿಂಟನ್​ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್

ಕೊರಿಯಾ ಓಪನ್ ಬ್ಯಾಡ್ಮಿಂಟನ್ 2023 ಪುರುಷರ ಡಬಲ್ಸ್‌ ಫೈನಲ್​ ಪಂದ್ಯದಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊರನ್ನು ಸೋಲಿಸಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸಾತ್ವಿಕ್-ಚಿರಾಗ್ ಜೋಡಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಅಂತಿಮ ಹಣಾಹಣಿಯಲ್ಲಿ 17-21, 21-13, 21-14 ಸೆಟ್​ಗಳಿಂದ ಜಯ ಸಾಧಿಸುವ ಮೂಲಕ ಭಾರತೀಯ ಜೋಡಿ ಕಿರೀಟ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ  ಥಾಯ್ಲೆಂಡ್​ ಓಪನ್ 2019 ಮತ್ತು ಇಂಡಿಯಾ ಓಪನ್ 2022 ರ ಪ್ರಶಸ್ತಿಗಳನ್ನು ಗೆದ್ದಿದ್ದ ಸಾತ್ವಿಕ್ ಮತ್ತು ಚಿರಾಗ್ ಇದೀಗ ವೃತ್ತಿಜೀವನದ ಮೂರನೇ ಸೂಪರ್ 500 ಪ್ರಶಸ್ತಿಯನ್ನು ಗೆದ್ದಿರುವುದು ವಿಶೇಷ.

ಹಾಗೆಯೇ ಇದು 2023 ರಲ್ಲಿ ಅವರ ಮೂರನೇ BWF ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಈ ಹಿಂದೆ ಈ ವರ್ಷದ ಆರಂಭದಲ್ಲಿ ಸ್ವಿಸ್ ಓಪನ್ 2023 (ಸೂಪರ್ 300) ಮತ್ತು ಇಂಡೋನೇಷ್ಯಾ ಓಪನ್ 2023 (ಸೂಪರ್ 1000) ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಇದೀಗ ಕೊರಿಯಾ ಸೂಪರ್ 500 ರಲ್ಲಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊ ವಿರುದ್ಧ ಭರ್ಜರಿ ಪೈಪೋಟಿ ನೀಡಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.