ಬೆಂಗಳೂರು: ನೈಸ್ ಯೋಜನೆಯ ಬಗ್ಗೆ ತನಿಖೆ ನಡೆಸಲು ನಾವೇನು ಕೈಕಟ್ಟಿ ಹಾಕಿದ್ದೇವೆ? ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಈಗಲಾದರೂ ಸತ್ಯ ಹೇಳಿ ಸತ್ಯರಾಮರಾಗಿ ಎಂದು ವ್ಯಂಗ್ಯವಾಡಿದ್ದಾರೆ.
ನೆಪ ಹೇಳದೆ ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆದು ಬದ್ಧತೆ ತೋರಿಸಲಿ. ಅಲ್ಲದೇ ನೈಸ್‍ಗೆ ನ್ಯಾಯ ಕೊಡಿ ಎಂದು ಹ್ಯಾಷ್ ಟ್ಯಾಗ್ ಮಾಡಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ನೈಸ್ ವಶಪಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ಈಗ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ನನಗೂ ಮುಖ್ಯಮಂತ್ರಿ, ಮಹಾದೇವಪ್ಪ ಅವರಿಗೂ ಮುಖ್ಯಮಂತ್ರಿ, ಕಾಕಾ ಪಾಟೀಲರಿಗೂ ಮುಖ್ಯಮಂತ್ರಿ. ನಿಮ್ಮನ್ನು ಸುಳ್ಳುರಾಮಯ್ಶ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಏಕೆಂದರೆ ನಿಮ್ಮ ಹೆಸರಿನಲ್ಲೇ ರಾಮ ಇದ್ದಾರೆ. ತಾವು ಸತ್ಯರಾಮಯ್ಯನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ ತಮ್ಮದೇ ಸರ್ಕಾರದ ಕಾನೂನು ಸಚಿವರು ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ದಯಮಾಡಿ ಪುರುಸೊತ್ತು ಮಾಡಿಕೊಂಡು ಪಾರಾಯಣ ಮಾಡಿ ಎಂದು ಕಿಡಿಕಾರಿದ್ದಾರೆ.
ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಕೇಳಿದ್ದಾರೆ. ಈ ಬಾಲಿಶ ಪ್ರಶ್ನೆಗೆ ಗೌರವದಿಂದಲೇ ಉತ್ತರಿಸುವೆ. ನಾನು ಸಿಎಂ ಆಗಿದ್ದಾಗ ನನ್ನ ಜೊತೆಗಿದ್ದ ಅಡ್ವೋಕೇಟ್ ಜನರಲ್ ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು. ಅದುವರೆಗೆ ಅಧಿಕಾರಿಗಳನ್ನು ಬೆದರಿಸಿಟ್ಟುಕೊಂಡಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು ಎಂದು ತಮ್ಮ ಅವಧಿಯ ವಿಚಾರ ಪ್ರಸ್ತಾಪ ಮಾಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿದ್ದ ಎಲ್ಲಾ ನಿಂದನಾ ಅರ್ಜಿಗಳನ್ನು 2019 ಜುಲೈನಲ್ಲಿ ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಅದಕ್ಕಾಗಿ ಅಂದಿನ ಅಡ್ವೋಕೇಟ್ ಜನರಲ್, ಮತ್ತವರ ತಂಡವನ್ನು ಅಭಿನಂದಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವೂ ಈ ಲೂಟಿ ಕಂಪನಿಯ ರೆಕ್ಕೆಪುಕ್ಕ ಕತ್ತರಿಸಿ ಹಾಕಿತ್ತು. ಅಂದಿಗೇ (2018) ನೈಸಿನ ಕೊಚ್ಚೆಯಲ್ಲಿ ಹೊರಳಾಡಿ ಸರಿಯಾಗಿ ಮೇಯ್ದು ಬಲಿತಿದ್ದ ಪ್ರಾಣಿಗಳನ್ನು ಎದುರು ಹಾಕಿಕೊಂಡ ರಿಸ್ಕ್ ಸಣ್ಣದೇನಲ್ಲ. ನನ್ನ ಮೇಲೆ ಬಂದ ಒತ್ತಡಗಳ ಬಗ್ಗೆ ನಿಮಗೂ ಮಾಹಿತಿ ಇರಬಹುದು. ಆಗ ನೀವು ಮತ್ತು ನಿಮ್ಮ ಟೀಮ್ ನನಗೆ ಕೊಟ್ಟ ನಿತ್ಯ ಕಿರುಕುಳವನ್ನು ಮರೆಯಲಾದೀತೆ? ಎಂದು ಚಾಟಿ ಬೀಸಿದ್ದಾರೆ.
ನಿಮ್ಮ ಹಂಗಿನಲ್ಲಿದ್ದ ನನಗೆ ನಿಮ್ಮದೇ ಪಕ್ಷದವರ ವಿರುದ್ಧ ತನಿಖೆ ನಡೆಸಿ, ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯುವ ದಮ್ಮು ತಾಕತ್ತು ಇರಲಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಿಮ್ಮದು ಪೂರ್ಣ ಬಹುಮತದ ಬಲಿಷ್ಠ ಸರ್ಕಾರ, ನುಡಿದಂತೆ ನಡೆಯುವ ಅಪರ ಹರಿಶ್ಚಂದ್ರನ ಸರ್ಕಾರ ಹೌದಲ್ಲವೇ? ಹಾಗಿದ್ದರೆ ಏಕೆ ತಡ? ಸ್ವತಃ ನೀವೇ ನೇಮಿಸಿದ್ದ ಸದನ ಸಮಿತಿ (2014-2016) ವರದಿಯ ಮೇಲೆ ಖಡಕ್ ಕ್ರಮ ಜರುಗಿಸಿ ಎಂದು ಕುಟುಕಿದ್ದಾರೆ.
ವರದಿಯಲ್ಲಿ ನೈಸ್ ಅಕ್ರಮಗಳ ಭಾಗವತವೇ ತೆರೆದುಕೊಂಡಿದೆ. ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ದಿಟ್ಟಹೆಜ್ಜೆ ಇಡಿ. ನೆಪ ಹೇಳಿ ಸಮಯವನ್ನು ಕೊಲ್ಲಬೇಡಿ. ಬಹುಮತ ಇದ್ದರೆ ಸಾಲದು, ಬದ್ಧತೆಯೂ ಇರಬೇಕು ಎಂದು ಹರಿಹಾಯ್ದಿದ್ದಾರೆ.
ನಾನು ರೈತರ ಸಾಲಮನ್ನಾ ಮಾಡಿದೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕೆ ನೀವು ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡಿದ್ದೂ ಅಷ್ಟೇ ಸತ್ಯ. ಭಾಗ್ಯಗಳಿಗೆ ನಯಾ ಪೈಸೆ ಕಡಿಮೆ ಆಗಬಾರದು ಎಂದು ನನಗೆ ಕೊಟ್ಟ ಚಿತ್ರಹಿಂಸೆ ಅಸತ್ಯವೇ? ಗಟ್ಟಿ ದನಿಯಲ್ಲಿ ಅಬ್ಬರಿಸಿ ಹೇಳಿದರೆ ಸುಳ್ಳು ಸತ್ಯವಾಗುವುದಿಲ್ಲ. ಸತ್ಯರಾಮಯ್ಯರಾಗಿ ಇತಿಹಾಸದಲ್ಲಿ ದಾಖಲಾಗಿ ಎಂದು ಸಿದ್ದರಾಮಯ್ಯರನ್ನ ಕಾಲೆಳೆದಿದ್ದಾರೆ.