ಮಣಿಪುರದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅದೇ ದಿನ ಮತ್ತಿಬ್ಬರು ಯುವತಿಯರ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಇದೀಗ ಸ್ವಾತಂತ್ರ್ಯ ಹೋರಾಟಗಾರನೊಬ್ಬರ ಪತ್ನಿಯನ್ನ ಸಜೀವ ದಹನ ಮಾಡಿರುವ ಘಟನೆ ಜನರನ್ನ ಬೆಚ್ಚಿ ಬೀಳಿಸಿದೆ.
ಕಾಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ 80 ವರ್ಷದ ಮಹಿಳೆಯನ್ನ ಮನೆಯೊಳಗೆ ಕೂಡಿಹಾಕಿಕೊಂಡು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಮೇ 28ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸೆರೋ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಮೃತ ಮಹಿಳೆ ಸ್ವಾತಂತ್ರ್ಯ ಹೋರಾಟಗಾರ ಎಸ್.ಚೂರಚಂದ್ ಸಿಂಗ್ ಅವರ ಪತ್ನಿ. ಚೂರಚಂದ್ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಗೌರವಿಸಲ್ಪಟ್ಟಿದ್ದರು.
ಕಳೆದ ಮೇ 3 ರಂದು ಹಿಂಸಾಚಾರ ಭುಗಿಲೇಳುವುದಕ್ಕೂ ಮುನ್ನ ರಾಜಧಾನಿ ಇಂಫಾಲ್‌ನಿಂದ 45 ಕಿಮೀ ದೂರದಲ್ಲಿ ಸುಂದರ ಗ್ರಾಮವಾಗಿದ್ದ ಸೆರೋ ಈಗ ಸ್ಮಶಾನದಂತೆ ಕಾಣುತ್ತಿದೆ. ಕೇವಲ ಸುಟ್ಟ ಮನೆಗಳಷ್ಟೇ ಕಣ್ಣಿಗೆ ಗೋಚರವಾಗುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಪರಿಶಿಷ್ಟ ಪಂಗಡಗಳ ಸ್ಥಾನಮಾನಕ್ಕಾಗಿ ಮಿಟೈಸ್ ಮತ್ತು ಕುಕಿ ಬುಡಕಟ್ಟಿನ ನಡುವೆ ಘರ್ಷಣೆ ಪ್ರಾರಂಭವಾದ ಕೆಲ ದಿನಗಳ ನಂತರ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿ 80 ವರ್ಷದ ಮಹಿಳೆಯನ್ನ ಜೀವಂತವಾಗಿ ಸುಟ್ಟುಹಾಕಿತ್ತು. ಆಕೆಯನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಮೊಮ್ಮಗ ಪ್ರೇಮಕಾಂತ ಕಣ್ಣಾರೆ ಕಂಡ ದೃಶ್ಯವನ್ನ ವಿವರಿಸಿದ್ದಾನೆ.
ಸುಮಾರು ಎರಡೂವರೆ ತಿಂಗಳಿನಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.