ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 186 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ನೊಂದಿಗೆ ತಮ್ಮ ಟೆಸ್ಟ್ ಶತಕದ ಬರವನ್ನು ಕೊನೆಗೊಳಿಸಿದ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.
ಇದು ವಿರಾಟ್ ಕೊಹ್ಲಿ ಅವರ ಅಂತರಾಷ್ಟ್ರೀಯ ವೃತ್ತಿಜೀವನದ 500 ನೇ ಪಂದ್ಯವಾಗಿದ್ದು, ಈ ಶತಕ ಅವರಿಗೆ ತುಂಬಾ ವಿಶೇಷವಾಗಿದೆ. ಈ ಶತಕದ ಮೂಲಕ ತಮ್ಮ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆ 76ನೇ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದ ವಿರಾಟ್ ಈ ಶತಕದೊಂದಿಗೆ ಹಲವರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಅದರಲ್ಲಿ ಪ್ರಮುಖವಾದದ್ದು, 21 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಕ್ರಿಕೆಟ್ ದೇವರು ಮಾಡಿದ ಸಾಧನೆಯನ್ನು ಇದೀಗ ವಿರಾಟ್ ಕೊಹ್ಲಿ ಪುನರಾವರ್ತಿಸಿದ್ದಾರೆ.
ಟ್ರಿನಿಡಾಡ್ ನಗರದ ಈ ಐತಿಹಾಸಿಕ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಉಭಯ ದೇಶಗಳ ನಡುವಣ 100ನೇ ಟೆಸ್ಟ್ ಪಂದ್ಯವಾಗಿರುವುದರೊಂದಿಗೆ ಕಿಂಗ್ ಕೊಹ್ಲಿಯ 500ನೇ ಅಂತಾರಾಷ್ಟ್ರೀಯ ಪಂದ್ಯವೂ ಆಗಿದೆ.
ತನ್ನ 500ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಳೆದ 5 ವರ್ಷಗಳಿಂದ ವಿದೇಶಿ ನೆಲದಲ್ಲಿ ಎದುರಿಸುತ್ತಿದ್ದ ಟೆಸ್ಟ್ ಶತಕದ ಬರವನ್ನು ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನೀಗಿಸಿದ್ದಾರೆ.
ಇದರೊಂದಿಗೆ 21 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ್ದ ಐತಿಹಾಸಿಕ ಸಾಧನೆಯನ್ನು ಕಾಕತಾಳೀಯವೆಂಬಂತೆ ಕೊಹ್ಲಿ ಪುನರಾವರ್ತಿಸಿದ್ದಾರೆ. ವಾಸ್ತವವಾಗಿ 2002 ರಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮಾಡಿತ್ತು.
ಆ ಪ್ರವಾಸದಲ್ಲೂ ಈ ಮೈದಾನದಲ್ಲೇ ಎರಡನೇ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಸಚಿನ್ ಸಿಡಿಸಿದ ಆ ಶತಕ ಅವರ ಟೆಸ್ಟ್ ವೃತ್ತಿ ಬದುಕಿನ 29ನೇ ಟೆಸ್ಟ್ ಶತಕವಾಗಿತ್ತು. ಈಗ ಕೊಹ್ಲಿ ಸಿಡಿಸಿರುವುದು ಕೂಡ 29ನೇ ಟೆಸ್ಟ್ ಶತಕ.
ಅಲ್ಲದೆ 21 ವರ್ಷಗಳ ಹಿಂದೆ 29ನೇ ಟೆಸ್ಟ್ ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್, ಅತಿ ಹೆಚ್ಚು ಟೆಸ್ಟ್ ಶತಕಗಳ ವಿಚಾರದಲ್ಲಿ ಆಸೀಸ್ ದಂತಕಥೆ ಸರ್ ಬ್ರಾಡ್ಮನರ್ನ್ನು ಸರಿಗಟ್ಟಿದ್ದರು. ಇದೀಗ ಕೊಹ್ಲಿ ಸಹ ಈ ದಾಖಲೆಯ ವಿಚಾರದಲ್ಲಿ ಬ್ರಾಡ್ಮನ್ರನ್ನು ಸರಿಗಟ್ಟಿದ್ದಾರೆ.