ಕೋಲಾರ: ಮಂಡ್ಯದಲ್ಲಿ ಕಂಡಕ್ಟರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ಇದೀಗ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪುಕುಂಟೆ ಗ್ರಾಮದ ಸೋಮಾಚಾರಿ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಕಂಡಕ್ಟರ್ ಇತ್ತೀಚೆಗೆ ಪೆರಾಲಿಸಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ಮಧ್ಯೆ ಕೆಲಸದ ವೇಳೆ ಶ್ರೀನಿವಾಸಪುರ ಡಿಪೋ ಮ್ಯಾನೇಜರ್ ವೆಂಕಟೇಶ್ ಎಂಬುವವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಕೇಳಿಬಂದಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದ ಸೋಮಾಚಾರಿ ಅವರು, ಇಂದು(ಜು.21) ಬೆಳಗಿನ ಜಾವ ಅವರ ತೋಟದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.