ತುಮಕೂರು: ಆಕೆ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಈ ಹಿಂದೆ ಮೋದಿ ಅವರು ಟೀ ಮಾರಿದಂತೆ ಈ ಅಭಿಮಾನಿಯೂ ಟೀ ಮಾರುತಿದ್ದಾಳೆ. ಟೀ ಮಾರಿ 20 ವರ್ಷದಿಂದ ಜೀವನ ಕಟ್ಟಿಕೊಂಡಿದ್ದಾಳೆ. ಅಷ್ಟೇ ಅಲ್ಲಾ ಟೀ ಮಾರಿದ ಮೋದಿ ಪಾರ್ಲಿಮೆಂಟ್ ಗೆ ಪ್ರಧಾನಿ ಆದ್ರೆ, ಈ ಅಭಿಮಾನಿ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾರೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗಿನ ಟೀ ಮಹಾತ್ಮೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಟೀ ಮಾರೋರೆಲ್ಲಾ ಪ್ರಧಾನಿಯಾಗಲ್ಲ, ಚಹಾ ಮಾರಿ ಜೀವನ ಕಟ್ಟಿಕೊಂಡವರೆಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲ್ಲ. ಆದರೆ ಅವರ ಪರಿಶ್ರಮ, ಏನಾದರೂ ಸಾಧನೆ ಮಾಡಬೇಕು ಅನ್ನೋ ಛಲ ಅವರನ್ನು ಉತ್ತುಂಗಕ್ಕೇರಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದ್ದು ತುಮಕೂರಿನ ಊರ್ಡಿಗೆರೆ ಗ್ರಾಮ ಪಂಚಾಯ್ತಿ. ಈ ಗ್ರಾಮ ಪಂಚಾಯ್ತಿಯಲ್ಲಿ ಚಹಾ ಮಾರುವ ಮಹಿಳೆಯೋರ್ವಳು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವರಾಯನದುರ್ಗ ದೇವಸ್ಥಾನದ ಬಳಿ ಪುಟ್ಟ ಟೀ ಅಂಗಡಿ ಇಟ್ಟುಕೊಂಡು ಕಳೆದ 20 ವರ್ಷದಿಂದ ಬದುಕು ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ. 2 ನೇ ಅವಧಿಗೆ ಗುರುವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಊರ್ಡಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 21 ಸದಸ್ಯರ ಸಂಖ್ಯೆ ಇದೆ. ಇದರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆ 10, ಜೆಡಿಎಸ್ ಬೆಂಬಲಿತರ ಸಂಖ್ಯೆ 11 ಇದೆ. ಅನ್ನಪೂರ್ಣಮ್ಮ ಬಿಜೆಪಿ ಬೆಂಬಲಿತ ಸದಸ್ಯೆ. ಆದರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್‍ನಲ್ಲಿ ನಾಲ್ಕು ಜನ ಮುಸ್ಲಿಂ ಮಹಿಳೆಯರೂ ಇದ್ದರು. ಆದರೂ ಅವರೆಲ್ಲರೂ ಸೇರಿ ಟೀ ಮಾರುವ ಅನ್ನಪೂರ್ಣಮ್ಮರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಪ್ಲಾನ್ ಇಲ್ಲಿ ಫಲಿಸಿದೆ.
ನೂತನವಾಗಿ ಅಧ್ಯಕ್ಷೆಯಾದ ಅನ್ನಪೂರ್ಣಮ್ಮ ಮಹಿಳಾಪರ ಹಲವು ಕನಸು ಕಂಡಿದ್ದಾರೆ. ತಮ್ಮ ಪಂಚಾಯ್ತಿ ವ್ಯಾಪ್ತಿಯ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುವ ವಾಗ್ದಾನ ಮಾಡಿದ್ದಾರೆ. ಒಟ್ಟಾರೆ ಟೀ ಮಾರೋ ಮಹಿಳೆ ಅಧ್ಯಕ್ಷೆ ಗಾದಿಗೆ ಏರಿರುವ ಯಶೋಗಾಥೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.