ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆಯರು; 10 ಜನರ ಬಾಳಿಗೆ ಬೆಳಕಾದರು

ಮೈಸೂರು, ಜು.19: ನಗರದ ಬೆಲವತ್ತದ ನಿವಾಸಿ ಸುಧಾ(48) ಅವರು ಜುಲೈ.15ರಂದು ಅಪಘಾತದಿಂದ ಗಾಯಗೊಂಡಿದ್ದರು. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳು‌ ನಿಷ್ಕ್ರಿಯವಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಸುಧಾ ಅವರು ಮತ್ತೆ ಮೊದಲಿನಂತಾಗುವ ಸಾಧ್ಯತೆಯಿರಲಿಲ್ಲ. ಈ ವೇಳೆ ಸುಧಾ ಮನೆಯವರು ಮಹತ್ವದ ನಿರ್ಧಾರ ಕೈಗೊಂಡು, ಅದರಂತೆ ಸುಧಾ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಅದರಂತೆ ಸುಧಾ ಅವರ ಯಕೃತ್ತು ಮೂತ್ರಪಿಂಡ ಕವಾಟು, ಕಾರ್ನಿಯಾ, ಶ್ವಾಸಕೋಶವನ್ನ 6 ಜನರಿಗೆ ದಾನ‌ ಮಾಡಲಾಯಿತು.

ಪುನೀತ್ ರಾಜಕುಮಾರ್ ಅವರ ಪ್ರೇರಣೆಯಿಂದ 73 ವರ್ಷದ ಗಂಗಾಂಬಿಕೆ ಅಂಗಾಂಗ ದಾನ

ಇನ್ನು ಮೈಸೂರಿನ ಜೆಪಿ ನಗರದ 73 ವರ್ಷದ ಗಂಗಾಂಬಿಕೆ ಎನ್ನುವವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರಿಗೂ ಚಿಕಿತ್ಸೆ ನೀಡಿದರು ಪ್ರಯೋಜನವಾಗಲಿಲ್ಲ. ಈ ಕಾರಣಕ್ಕೆ ಗಂಗಾಂಬಿಕೆ‌ ಮನೆಯವರು ಸಮಾಜಕ್ಕೆ ಪ್ರೇರಣೆಯಾಗುವ ದೃಷ್ಟಿಯಿಂದ ಅವರ ಯಕೃತ್, ಎರಡು ಮೂತ್ರಪಿಂಡಗಳನ್ನು ದಾನ ಮಾಡುವ ಮುಖಾಂತರ ನಾಲ್ಕು ಜನರ ಬದುಕಿಗೆ ಬೆಳಕಾಗಿದ್ದಾರೆ. ಇದಕ್ಕೆ ನಟ ಪುನೀತ್ ರಾಜಕುಮಾರ್ ಅವರ ಪ್ರೇರಣೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರದ ಸುಧಾ ಹಾಗೂ ಗಂಗಾಂಬಿಕೆ ಅವರ ಮೃತದೇಹಕ್ಕೆ ಸಕಲ ಗೌರವ

ಹೌದು ಸಾವಿನಲ್ಲೂ ಸಾರ್ಥಕತೆ ಮೆರೆದ ಸುಧಾ ಹಾಗೂ ಗಂಗಾಂಬಿಕೆ ಅವರ ಮೃತದೇಹಕ್ಕೆ ಸಕಲ ಗೌರವವನ್ನು ಸಲ್ಲಿಸಲಾಯ್ತು. ಆಸ್ಪತ್ರೆ ಸಿಬ್ಬಂದಿ ಸರತಿ ಸಾಲಿನಲ್ಲಿ ನಿಂತು ಅಂತಿಮ ಗೌರವ ಸಮರ್ಪಣೆ ಮಾಡಿದರು. ದೀಪದಿಂದ ದೀಪವ ಹಚ್ಚಬೇಕು ಎನ್ನುವ ಮಾತಿನಂತೆ ಸಾವಿನ ನೋವಿನಲ್ಲೂ ಮನೆಯವರ ಸಮಯಪ್ರಜ್ಞೆಯಿಂದ ಹಾಗೂ ಅವರ ಧೃಡ ನಿರ್ಧಾರದಿಂದ ಹಲವರ ಬಾಳು ಬೆಳಗಿದೆ. ಇದು ಎಲ್ಲರಿಗೂ ಮಾದರಿಯಾಗಲಿ ಎನ್ನುವುದೇ ಎಲ್ಲರ ಆಶಯ.