ವಿಧಾನಸಭೆ (ಜು.19): ರಾಜ್ಯದಲ್ಲಿ ಕಳೆದ ಎರಡೇ ತಿಂಗಳಲ್ಲಿ ಮುಂಗಾರು ವೈಫಲ್ಯದಿಂದ ನಷ್ಟಕ್ಕೊಳಗಾದ 42 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರ ವಿಚಾರ. ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪಕ್ಷೇತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು. ಸದನದಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆತ್ಮಹತ್ಯೆಗೊಳಗಾದ ರೈತರ ಪೈಕಿ 18 ಜನ ಹಾವೇರಿ ಜಿಲ್ಲೆಯವರಾಗಿದ್ದಾರೆ.
ಈ ಬಾರಿ ಮುಂಗಾರು ವೈಫಲ್ಯದಿಂದಾಗಿ ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬೆಳೆ ಕಚ್ಚದೆ ಮಾಡಿದ ಸಾಲ ತೀರಿಸಲು ಪರಿತಪಿಸುವಂತಾಗಿದೆ. ಇದರಿಂದ ನೊಂದ ಹಲವು ಸಣ್ಣ, ಅತಿ ಸಣ್ಣ ರೈತರು ಆತ್ಮಹತ್ಯೆಗೀಡಾಗಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಇಂತಹ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಇನ್ನಷ್ಟು ರೈತರು ಆತ್ಮಹತ್ಯೆಗೊಳಗಾಗುವುದನ್ನು ತಪ್ಪಿಸಬೇಕು ಎಂದು ಕೋರಿದರು. ಸರ್ಕಾರದ ಯಾವುದೇ ಯೋಜನೆಗಳಿಗೆ ಸರ್ವರ್ ಡೌನ್ ಎಂಬ ಸಮಸ್ಯೆ ಎಲ್ಲೆಡೆ ಸಾಮಾನ್ಯವಾಗಿ ಕೇಳಿಬರುತ್ತದೆ.
ಹಾಗಾಗಿ ಈ ಸಮಸ್ಯೆ ಪರಿಹರಿಸಲು ಸರ್ಕಾರ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಸೇರಿಸಬೇಕು. ಉಚಿತ ಗ್ಯಾರಂಟಿಗಳಂತಹ ಯೋಜನೆಗಳಿಂದ ಜನರ ಕೈಗೆ ಹೆಚ್ಚು ಹಣ ಸಿಕ್ಕರೆ ಚಲಾವಣೆ ಹೆಚ್ಚಾಗುತ್ತದೆ ರಾಜ್ಯ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, ಹೆಚ್ಚು ಹಣ ಚಲಾವಣೆಯಿಂದ ಹಣದುಬ್ಬರ ಸದಸ್ಯೆಯೂ ಉದ್ಭವಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡ, ಈ ಪೈಕಿ ಹಾವೇರಿಯಲ್ಲೇ 18 ರೈತರು ಬಲಿಯಾದ ವಿಷಯದ ಬಗ್ಗೆ ‘ಕನ್ನಡಪ್ರಭ’ ಸೋಮವಾರ ವರದಿ ಪ್ರಕಟಿಸಿತ್ತು.
ಮೂಲ ಸೌಕರ್ಯ ಕಲ್ಪಿಸಲು ಯೋಜನೆ ತಯಾರಿಸಿ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ವಿವಿಧ ಇಲಾಖಾ ಅಧಿಕಾರಿಗಳು ಯೋಜನೆ ತಯಾರಿಸಿ ಜು.29ರಂದು ಕರೆದಿರುವ ಸಭೆಯಲ್ಲಿ ಸಲ್ಲಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳ ಸಭೆನಡೆಸಿ ಮಾತನಾಡಿ, ಮೇಲುಕೋಟೆ ವಿಶ್ವಮಟ್ಟದಲ್ಲಿ ಹೆಸರಾದ ಧಾರ್ಮಿಕ ಕೇಂದ್ರವಾದರೂ ಭಕ್ತರಿಗೆ ನೀಡಬೇಕಾದ ಮೂಲ ಸೌಕರ್ಯದಿಂದ ವಂಚಿತವಾಗಿದೆ ಎಂದರು. ಶೌಚಾಲಯ ಮತ್ತು ಸ್ನಾನಗೃಹಗಳ ಅತ್ಯಾಧುನಿಕ ಕಾಂಪ್ಲೆಕ್ಸ್‌ಗಳು ಕುಡಿಯುವ ನೀರಿನ ಶುಧ್ದೀಕರಿಸಿದ ಘಟಕಗಳು ಮೂರು ತಿಂಗಳಲ್ಲಿ ಆರಂಭಿಸಿ, ವಸತಿ ಗೃಹ ನಿರ್ಮಾಣ ಸಹ ಪ್ರಾರಂಭಿಸಬೇಕು.
ಕಣಿವೆ ಬಳಿ ಭಕ್ತರನ್ನು ಸ್ವಾಗತಿಸುವ ಭವ್ಯವಾದ ಸ್ವಾಗತ ಕಮಾನು ಪಾರಂಪರಿಕ ಶೈಲಿಯಲ್ಲೇ ನಿರ್ಮಿಸಬೇಕಿದೆ ಎಂದರು. ಅಧಿಕಾರಿಗಳು ಯೋಜನೆ ನೀಲನಕ್ಷೆ ಕೊಡಿ ಎಲ್ಲೆಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ಮನಬಂದಂತೆ ನಿರ್ಮಿಸಿದರೆ ಭಕ್ತರು ಉಪಯೋಗ ಮಾಡಲು ಸಾಧ್ಯವಾಗದೆ ನಿರುಪಯುಕ್ತವಾಗುತ್ತದೆ. ಸಂತೆಮಾಳ ಮತ್ತು ಆಸ್ಪತ್ರೆಮುಂಭಾಗ ನಿರ್ಮಿಸಿರುವ ತಗಡಿನ ಶೌಚಾಲಯ ಅಸಮರ್ಪಕವಾಗಿದೆ. ಇಂತಹ ಕಾಮಗಾರಿ ಮಾಡಿ ಸರ್ಕಾರದ ಹಣ ಪೋಲು ಮಾಡಬೇಡಿ 30 ವರ್ಷಗಳಿಗೆ ಆಗುವಂತೆ ಯೋಜನೆ ರೂಪಿಸಿ ಎಂದರು 2021ರಲ್ಲೇ ನಿರ್ಮಾಣವಾದ ಅನ್ನದಾನಭವನ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಇನ್ನೂ ಬಳಕೆಗೆ ಬಂದಿಲ್ಲ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಾಂಪೌಂಡ್ ನಿರ್ಮಿಸಲು ಇದ್ದ ಸಮಸ್ಯೆ ಬಗೆಹರಿಸಿದ್ದಾರೆ.
ಮನೆ ಭಾಗಶಃ ಕಳೆದುಕೊಳ್ಳುವ ಮಹಿಳೆ ಜೊತೆ ಮಾತನಾಡಿ ಮನವೊಲಿಸಿದ್ದಾರೆ ಎಂದರು. ತಕ್ಷಣ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಿ ಅನ್ನದಾನ ಭವನಕ್ಕೆ ಪಾತ್ರೆ, ತಟ್ಟೆಲೋಟ ಸೇರಿದಂತೆ ಬೇಕಾದ ಅಗತ್ಯವಸ್ತುಗಳನ್ನು ಪಟ್ಟಿಮಾಡಿ ಸಂಗ್ರಹ ಮಾಡಿ ದೇವಾಲಯಗಳಲ್ಲಿ ಸೋರಿಕೆ ತಡೆಗಟ್ಟಿಆದಾಯ ಹೆಚ್ಚಿಸಲು ಹೊಸಸೇವೆಗಳನ್ನು ಆರಂಭಿಸಬೇಕು. ಮುದ್ರಿತ ಚೀಟಿ ನೀಡುವುದನ್ನು ನಿಲ್ಲಿಸಿ ಗಣಕೀಕರಣದ ರಶೀತಿಗಳನ್ನು ವಿತರಿಸಿ ಪಾರದರ್ಶಕವಾಗಿ ಹಣಕಾಸು ನಿರ್ವಹಣೆ ಮಾಡಿ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ಗೆ ಸೂಚನೆ ನೀಡಿದರು.