ತುಮಕೂರು, ಜುಲೈ 19: ಗೃಹ ಸಚಿವ ಡಾ.ಜಿ ಪರಮೇಶ್ವರ್ ತವರು ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಯ ದರ್ಬಾರ್ ಕಂಡುಬಂದಿದೆ. ನನ್ನ ಮತ ನನ್ನ ಹಕ್ಕು ಎಂದು ಹೇಳಿದ ವ್ಯಕ್ತಿಗೆ ಸರ್ಕಾರಿ ಅಧಿಕಾರಿ ಮನ ಬಂದಂತೆ ಥಳಿಸಿ ದರ್ಪ ಮೆರೆದಿದ್ದಾರೆ. ಇತ್ತೀಚಿಗೆ ನಡೆದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ತನ್ನ ಪತ್ನಿಗೆ ಮತ ಹಾಕುವಂತೆ ಮತ ಕೇಳಲು ಬಂದಿದ್ದ ಸರ್ಕಾರಿ ಅಧಿಕಾರಿ ವ್ಯಕ್ತಿಯನ್ನು ಮನ ಬಂದಂತೆ ಥಳಿಸಿ ದರ್ಪ ಮೆರೆದಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳೆ ಗ್ರಾ.ಪಂ ಸದಸ್ಯ ಡಿ.ಎಲ್.ಮಲ್ಲಯ್ಯ ಮೇಲೆ ಕೊರಟಗೆರೆ ಪಿಡಬ್ಯುಡಿ ಪ್ರಥಮ ದರ್ಜೆ ಸಹಾಯಕನಾಗಿರೋ ಚಿಕ್ಕಣ್ಣ ಹಲ್ಲೆ ನಡೆಸಿದ್ದಾರೆ. ಚಿಕ್ಕಣ್ಣನ ಪತ್ನಿ ದಿವ್ಯಜ್ಯೋತಿ ಹುಲೀಕುಂಟೆ ಗ್ರಾಪಂ ಅಧ್ಯಕ್ಷ ಚುನಾವಣೆ ಆಕಾಂಕ್ಷಿಯಾಗಿದ್ದರು. ಹಾಗೂ ಉಪಾಧ್ಯಕ್ಷೆ ಸ್ಥನಕ್ಕೆ ಮಂಜುನಾಥ್ ಎಂಬುವವರ ಪತ್ನಿ ಆಕಾಂಕ್ಷಿಯಾಗಿದ್ದರು. ಹೀಗಾಗಿ ಸರ್ಕಾರಿ ಅಧಿಕಾರಿ ಚಿಕ್ಕಣ್ಣ ತನ್ನ ಪತ್ನಿಗೆ ಮತಹಾಕುವಂತೆ ಮತಯಾಚನೆ ಮಾಡಿದ್ದರು. ಹಣ ಕೊಡ್ತೀನಿ ಮತಹಾಕು ಎಂದು ಚಿಕ್ಕಣ ಹಾಗೂ ಮಂಜುನಾಥ್ ಇಬ್ಬರೂ ಜೊತೆಗೂಡಿ ಮಲ್ಲಯ್ಯಗೆ ಒತ್ತಾಯ ಮಾಡಿದ್ರು. ಹಣಕೊಡ್ತೀನಿ ಅಂದ್ರೂ ಒಪ್ಪದಿದ್ದಕ್ಕೆ ಗ್ರಾಪಂ ಸದಸ್ಯ ಮಲ್ಲಯ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಕುಳಿತಿದ್ದ ಮಲ್ಲಯ್ಯನ ಮೇಲೆ ಚಿಕ್ಕಣ್ಣ ಮತ್ತು ಮಂಜುನಾಥ್ ಹಲ್ಲೆ ಮಾಡಿ ದರ್ಪ ಮೆರೆದಿದ್ದಾರೆ.
ಕಳೆದ ಜುಲೈ 15ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗ್ರಾ.ಪಂ ಸದಸ್ಯ ಮಲ್ಲಯ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರ್ತವ್ಯದ ವೇಳೆಯಲ್ಲೇ ಪಾನಮತ್ತನಾಗಿ ಚಿಕ್ಕಣ್ಣ ಹಲ್ಲೆ ಮಾಡಿರೋದಾಗಿ ಮಲ್ಲಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಹುಲಿಕುಂಟೆ ಗ್ರಾ.ಪಂ ಅಧ್ಯಕ್ಷೆಯಾಗಿ ಜಯಮ್ಮ ಎಂಬುವವರು ಆಯ್ಕೆ ಆಗಿದ್ದಾರೆ.