ಬೆಂಗಳೂರು, (ಜುಲೈ 19): ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲಗೊಳಿಸಿದ್ದಾರೆ. ಮಡಿವಾಳದ FSL ಆವರಣದ ಇಂಟ್ರಾಗೇಷನ್ ಸೆಲ್ನಲ್ಲಿ ವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸ್, ಹೋಟೆಲ್, ಬಸ್ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಶಂಕಿತ ಉಗ್ರರು ಮುಂದೆ ಬಾಯ್ಬಿಟ್ಟಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಒಟ್ಟು 7 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಯುಎಪಿಎ, 120 B, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ ಸೆಕ್ಷನ್ 122 ,121ಯಡಿ ಪ್ರಕರಣ ದಾಖಲಾಗಿದೆ.
2008ರ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ.ನಜೀರ್ ಎ1 ಆರೋಪಿಯಾಗಿದ್ದು, ಸದ್ಯ ಈತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಎ2 ಆರೋಪಿಯಾಗಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಬಂಧಿತರಾಗಿರುವ ಐವರಲ್ಲಿ ಸುಹೇಲ್ ಎ3, ಉಮರ್ ಎ4, ಜಾಹಿದ್ ಎ5, ಮುದಾಸಿರ್ ಎ6, ಫೈಜರ್ 7ನೇ ಆರೋಪಿ ಎಂದು ಕೇಸ್ ದಾಖಲಾಗಿದೆ.
ಬಂಧಿತ ಶಂಕಿತ ಭಯೋತ್ಪಾದಕರು ಬೆಂಗಳೂರಿನ ಸುಲ್ತಾನ್ ಪಾಳ್ಯದ ಕನಕನಗರದ ಪದ್ಮಾವತಿ ಎಂಬುವವರ ಮನೆಯಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಬಾಡಿಗೆಗೆ ವಾಸವಿದ್ದರು. ಇನ್ನು ಬಂಧಿತ ಆರೋಪಿಗಳಿಂದ 7 ಪಿಸ್ತೂಲ್, 12 ಫೋನ್ಗಳು, 45 ಜೀವಂತ ಗುಂಡು, ವಾಕಿಟಾಕಿ ಸೇರಿ ಹಲವು ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಪ್ರಕರಣದ 2ನೇ ಆರೋಪಿ ಜುನೈದ್ ವಿರುದ್ಧದ ಪ್ರಕರಣಗಳು
- 2017 ಕಿಡ್ನಾಪ್ ಅಂಡ್ ಮರ್ಡರ್ ಕೇಸ್.
- 2020 ರಕ್ತ ಚಂದನ ಕೇಸ್,
- 2021 ಡರೋಡೆಗೆ ಸಂಚು ಕೇಸ್
- 2021 ದರೋಡೆಗೆ ಸಂಚು. ಕೇಸ್.
- 2021 ರಿಂದ ಜುನೈದ್ ಜೈಲಿನಿಂದ ಬಿಡುಗಡೆಯಾಗಿದ್ದು, ಸದ್ಯ ಈತ ವಿದೇಶದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ.