ಡೆಹ್ರಾಡೂನ್: ಉದ್ಯಮಿಯೊಬ್ಬರನ್ನು ನಾಗರ ಹಾವಿನಿಂದ ಕಚ್ಚಿಸಿ ಕೊಲೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಉತ್ತರ ಪ್ರದೇಶದ ಹಾವಾಡಿಗ ರಮೇಶ್‍ನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಎಂಬುವವರು ಆರೋಪಿಗಳಾಗಿದ್ದು ಇವರಿಗೆ ಕುಟುಂಬಸ್ಥರು ಸಹಕರಿಸಿದ್ದಾರೆ. ಈಗ ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜು.15 ರಂದು ತೀನ್‍ಪಾನಿ ಪ್ರದೇಶದ ಬಳಿ ಅಂಕಿತ್ ಚೌಹಾಣ್ (30) ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಾವಿನ ವಿಷ ಸೇರಿ ಮೃತಪಟ್ಟಿದ್ದು ತಿಳಿದು ಬಂದಿತ್ತು. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.
ಬಳಿಕ ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್‍ನ್ನು ಟ್ರ್ಯಾಕ್ ಮಾಡಲಾಗಿದೆ. ಈ ವೇಳೆ ಮಹಿಳೆ ಹಾವಾಡಿಗನೊಂದಿಗೆ ಸಂಪರ್ಕಿಸಿರುವುದು ತಿಳಿದು ಬಂದಿದೆ. ಅಲ್ಲದೇ ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿ ಬದಲಾಯಿತು ಎಂದು ಹಿರಿಯ ಪೆÇಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದಾರೆ.
ಡಾಲಿಗೆ ಅಂಕಿತ್ ಮದ್ಯಪಾನದ ಅಮಲಿನಲ್ಲಿ ನಿಂದಿಸುತ್ತಿದ್ದ ಇದಕ್ಕಾಗಿ ಕೊಲೆಗೈಯಲಾಗಿದೆ. ಅಲ್ಲದೇ ಆತ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಉಳಿದ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಈ ಸಂಬಂಧ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ ಆರೋಪ) ಅಡಿಯಲ್ಲಿ ಐವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.