ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ರೋಚಕ ಅಪ್ಡೇಟ್‍ಗಳು ಸಿಗುತ್ತಿದೆ. ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಬಂಧಿತ ಶಂಕಿತ ಉಗ್ರರಾಗಿದ್ದು, ಪ್ರಮುಖ ಲೀಡರ್ ಜುನೈದ್ ತಲೆಮರೆಸಿಕೊಂಡಿದ್ದಾನೆ.
ರೌಡಿಗಳಾಗಿದ್ದ ಶಂಕಿತರು: ಬೆಂಗಳೂರಿನಲ್ಲಿ ಸದ್ದಿಲ್ಲದೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಶಂಕಿತರು ಅಸಲಿಗೆ ರೌಡಿಗಳಾಗಿದ್ದರು. ಇವರೆಲ್ಲ 2017ರಲ್ಲಿ ಆರ್ ಟಿ ನಗರದಲ್ಲಿ ನೂರ್ ಅಹ್ಮದ್‍ನ ಕಿಡ್ನಾಪ್ ಕಮ್ ಮರ್ಡರ್ ಕೇಸ್ ನ ಆರೋಪಿಗಳು. ಈ ಕೇಸಲ್ಲಿ 21 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕೊಲೆ ಮಾಡಿ ಜೈಲು ಸೇರಿದ ರೌಡಿಗಳಿಂದ ಇದೀಗ ಬ್ಲ್ಯಾಸ್ಟ್ ಗೆ ಸಂಚು ರೂಪಿಸಲಾಗುತ್ತಿತ್ತು.
ಜೈಲು ಸೇರಿದವರಿಗೆ ಟೆರರಿಸ್ಟ್ ಗಳ ಲಿಂಕ್: ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದವರಿಗೆ ಜೈಲು ಸಿಬ್ಬಂದಿ ಟೆರರಿಸ್ಟ್ ಸೆಲ್ ನೀಡಿದ್ದರು. ಈ ವೇಳೆ ಶಂಕಿತರು ಜೈಲಿನಲ್ಲಿ ಟೆರರಿಸ್ಟ್ ಗಳ ವಿಶ್ವಾಸ ಗಳಿಸಿದ್ದರು. ಜೈಲಿನಲ್ಲೇ ಶಂಕಿತರಿಗೆ ಮೈಂಡ್ ವಾಶ್, ಟ್ರೈನಿಂಗ್ ನಡೆದಿತ್ತು. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವಂತೆ ಮೈಂಡ್ ವಾಶ್ ಮಾಡಲಾಗಿತ್ತು. ಅಂತೆಯೇ ಜೈಲಿನಿಂದ ರಿಲೀಸ್ ಆದ ಬಳಿಕ ಬೆಂಗಳೂರಲ್ಲಿ ದೊಡ್ಡ ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದರು.
ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಶಂಕಿತರು ಜಮಾತ್ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಪೊಲೀಸರಿಗೆ ಒಂದಷ್ಟು ಸಾಕ್ಷ್ಯಗಳು ಲಭ್ಯವಾಗಿದೆ. ಆರೋಪಿಗಳ ಬಂಧನದ ವೇಳೆ 4 ಪಿಸ್ತೂಲ್, ಸ್ಫೋಟಕ ವಸ್ತುಗಳು ವಾಕಿಟಾಕಿ, ಮೊಬೈಲ್‍ಗಳು ಪತ್ತೆ ಆಗಿದೆ. ಈ ಸಂಬಂಧ ಎನ್‍ಐಎ (NIA) ಅಧಿಕಾರಿಗಳು ಹಾಗೂ ಸಿಸಿಬಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜುನೈದ್ ಸದ್ಯ ವಿದೇಶದಲ್ಲಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಶಂಕಿತರ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಐಪಿಸಿ 120, 121 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ರಾಷ್ಟ್ರದ್ರೋಹ ಆರೋಪದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಶಕ್ಕೆ ಪಡೆದ ಶಂಕಿತರನ್ನ ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಸ್ಫೋಟಕ ವಸ್ತುಗಳು ಪತ್ತೆ: ಶಂಕಿತ ಉಗ್ರರ ಬಳಿ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡುಗಳು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಗಳು ಹಾಗೂ 4 ಗ್ರೆನೈಡ್ ಗಳು ಪತ್ತೆಯಾಗಿವೆ.
ಟಾರ್ಗೆಟ್ ಬೆಂಗಳೂರು: ಶಂಕಿತ ಉಗ್ರರು ಬೆಂಗಳೂರು ಸಿಟಿಯನ್ನೇ ಟಾರ್ಗೆಟ್ ಮಾಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸ್ಥಳೀಯ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಕಾಂಟ್ಯಾಕ್ಟ್ ಆಗಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು? ಏನು ಅನ್ನೋದರ ಬಗ್ಗೆಯೂ ಟ್ರೈನಿಂಗ್ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್ ಗೆ ಪ್ಲಾನ್ ಮಾಡಿದ್ದ ಮಾಹಿತಿ ಸಿಕ್ಕಿದೆ. ಎಲ್ಲಾ ಪ್ಲಾನ್ ಮಾಡಿಕೊಂಡು ಎಕ್ಸಿಕ್ಯೂಟ್‍ಗೆ ಕಾಯುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.