ಬೆಂಗಳೂರು: ಪ್ರಧಾನ ಮಂತ್ರಿ ಸ್ಥಾನದ ಕಾಂಗ್ರೆಸ್‌ಗೆ ಆಸಕ್ತಿಯಿಲ್ಲ ಎಂದು ವಿಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 2ನೇ ದಿನ ನಡೆದ, ಯುಪಿಎ ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಸ್ಥಾನ ಕೂಡ ಕಾಂಗ್ರೆಸ್‌ಗೆ ಅಗತ್ಯವಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ರಕ್ಷಣೆ ಮಾತ್ರ ನಮ್ಮ ಉದ್ದೇಶ. ನಮ್ಮ ಒಕ್ಕೂಟದ ಬಳಿಕ ಬಿಜೆಪಿ ತನ್ನ ಸ್ನೇಹಿತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಇದು ನಮ್ಮ ಮೊದಲ ಗೆಲುವು ಎಂದು ಹೇಳಿದರು.
ಕೆಲವು ರಾಜ್ಯಗಳಲ್ಲಿ ನಮ್ಮ ನಮ್ಮ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ನಾವೆಲ್ಲರೂ ಕೂಡ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕಿದೆ. ಸಾಮಾನ್ಯ ಜನರ ಸಂಕಷ್ಟ ಪರಿಹಾರದ ಸಲುವಾಗಿ ನಮ್ಮ ಭಿನ್ನಾಭಿಪ್ರಾಯ ದೂರವಿಟ್ಟು ಕೆಲಸ ಮಾಡಬೇಕಿದೆ. ದಲಿತರು, ಆದಿವಾಸಿಗಳ ಸಲುವಾಗಿ ನಮ್ಮ ಬೇಧಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡೋಣ ಎಂದು ವಿಪಕ್ಷಗಳ ನಾಯಕರಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ವಿಪಕ್ಷಗಳ ವಿರುದ್ಧ ಅಸ್ತçವಾಗಿ ಬಳಕೆ ಮಾಡುತ್ತಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಸಿಬಿಐ, ಇಡಿಯನ್ನು ಬಳಸುತ್ತಿದೆ. ವಿಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಕಾನೂನು ದುರುಪಯೋಗ ಮಾಡಿಕೊಂಡು ನಮ್ಮ ಸಂಸದರನ್ನೇ ಅಮಾನತು ಮಾಡಿದ್ದಾರೆ. ಶಾಸಕರನ್ನು ಹಣ, ತನಿಖಾ ಸಂಸ್ಥೆಗಳ ಮೂಲಕ ಬೆದರಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಕಡೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಲವು ರಾಜ್ಯಗಳಲ್ಲಿ ನಮ್ಮ ಸರ್ಕಾರವಿದೆ. ಈ ರಾಜ್ಯಗಳಲ್ಲಿ ನಾವೆಲ್ಲಾ ಒಟ್ಟಾಗಿ ತಂತ್ರಗಾರಿಕೆ ಮಾಡಬೇಕು. ಆಗ ಬಿಜೆಪಿಗೆ ಸಹಜವಾಗಿಯೇ ಹಿನ್ನಡೆಯಾಗಲಿದೆ ಎಂದು ತಿಳಿಸಿದರು.