ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಅಚ್ಚನಹಳ್ಳಿ ಗ್ರಾಮದ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ, ಅಕ್ರಮವಾಗಿ ಮನೆ, ರೆಸಾರ್ಟ್ ನಿರ್ಮಾಣ ಮಾಡಿದ ಅರೋಪದ ಮೇಲೆ ಬೆಂಗಳೂರಿನಿಂದ ಆಗಮಿಸಿದ 30 ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿತ್ತು. ಸ್ಟೋನ್ ವ್ಯಾಲಿ ಹೆಸರಿನ ರೆಸಾರ್ಟ್ ಹಾಗೂ ಮಾಲೀಕರ ಮನೆಗೆ ಅಳವಡಿಸಿದ್ದ ಸಿಸಿ ಟಿವಿ ಸಂಪರ್ಕ ಕಡಿತಗೊಳಿಸಿ, ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಬಳಿಕ ರೆಸಾರ್ಟ್ ಮಾಲೀಕರು ‘ತಮ್ಮ ಕುಟುಂಬ ಹಾಗೂ ಸಿಬ್ಬಂದಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಅಕ್ರಮ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು
ಇನ್ನು ನಶಿಸುತ್ತಿರುವ ಅರಣ್ಯ ಸಂಪತ್ತನ್ನ ರಕ್ಷಣೆ ಮಾಡುವ ಸಲುವಾಗಿ ಕಳೆದ ಕೆಲವು ದಿನಗಳ ಹಿಂದಷ್ಟೆ ವನಗೂರು ಸಮೀಪದ ರೆಸಾರ್ಟ್‌ಗೆ ಅರಣ್ಯ ಇಲಾಖೆ ದಾಳಿ ಮಾಡಿ, ಪರಿಶೀಲನೆ ನಡೆಸಿ ಬೀಗ ಜಡಿದಿತ್ತು. ಇದೀಗ ಮತ್ತೆ ದಿಢೀರ್ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಕ್ರಮ ರೆಸಾರ್ಟ್ನ್ನು ಮುಚ್ಚಿಸಿದ್ದಾರೆ. ಇನ್ನು ಇದೊಂದೆ ಅಲ್ಲ, ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸುಮಾರು 20 ಕ್ಕೂ ಹೆಚ್ಚು ರೆಸಾರ್ಟ್ ಹಾಗೂ ಹೋಂ ಸ್ಟೇಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ.