ಚಿಕ್ಕಮಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ರುಕ್ಮಿಣಿ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೂರು ಠಾಣೆಯ ಪೊಲೀಸರು ಆರೋಪಿ ಕಣ್ಣನ್ನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ದೂರು ದಾಖಲಿಸಲು ಹೋದಾಗ ಪೊಲೀಸರು ಧಮ್ಕಿ ಹಾಕಿದ್ದಾರೆಂದು ರುಕ್ಮಿಣಿ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ನ್ಯಾಯಕ್ಕಾಗಿ ರುಕ್ಮಿಣಿ ಸಂಬಂಧಿಕರು ಚಿಕ್ಕಮಗಳೂರು ಎಸ್ಪಿ ಕಚೇರಿಗೆ ತೆರಳಿ ಕಡೂರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಣ್ಣನ್ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪತಿ ಕಣ್ಣನ್ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ
ನಿನ್ನೆ (ಜು.16) ರಂದು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ರುಕ್ಮಿಣಿ (30) ಶವ ಪತ್ತೆಯಾಗಿತ್ತು. ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿ ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಪತಿ ಕಣ್ಣನ್ ಶವಗಾರಕ್ಕೆ ಮೃತ ದೇಹ ಸಾಗಿಸಿ ಪರಾರಿಯಾಗಿದ್ದಾನೆ. ಮಂಡ್ಯ ಮೂಲದ ರುಕ್ಮಿಣಿ 13 ವರ್ಷಗಳ ಹಿಂದೆ ಕಡೂರು ಮೂಲದ ಕಲ್ಲು ವ್ಯಾಪಾರಿ ಕಣ್ಣನ್ ಅವರ ಜೊತೆ ಮದುವೆಯಾಗಿದ್ದರು.