ಮೈಸೂರು, (ಜುಲೈ 17): ತಂದೆ-ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದ 13 ವರ್ಷದ ಬಾಲಕಿ ಜಲಸಮಾಧಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಬಳಿ ನಡೆದಿದೆ. ಗಂಧನಹಳ್ಳಿಯ ಲೋಕೇಶ್ ಎಂಬುವರ ಪುತ್ರಿ 13 ವರ್ಷದ ಸ್ಫೂರ್ತಿ ಮೃತ ದುರ್ವೈವಿ. ತಂದೆ-ತಾಯಿ ಜೊತೆ ಕಪ್ಪಡಿ ಕ್ಷೇತ್ರಕ್ಕೆ ಬಂದಿದ್ದ ಸ್ಫೂರ್ತಿ, ಕೈ ತೊಳೆಯುವಾಗ ಕಾಲು ಜಾರಿ ಕಾವೇರಿ ನದಿಯಲ್ಲಿ ಬಿದ್ದಿದ್ದಾಳೆ. ಸ್ಫೂರ್ತಿ ಮೃತ ದೇಹ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಇಂದು (ಜುಲೈ 17) ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಂಧನಹಳ್ಳಿಯ ಸ್ಫೂರ್ತಿ, ತನ್ನ ತಂದೆ ತಾಯಿ ಜೊತೆ ಶ್ರೀ ಕ್ಷೇತ್ರ ಕಪ್ಪಡಿಗೆ ಬಂದಿದ್ದಳು. ಆದ್ರೆ, ದುರ್ವೈವ ದೇವಸ್ಥಾನಕ್ಕೆ ಹೋಗುವ ಮುನ್ನ ಕೈಕಾಲು ತೊಳೆದುಕೊಳ್ಳಲು ಹೋದಾಗ ಸ್ಫೂರ್ತಿ ಕಾವೇರಿ ನದಿ ಪಾಲಾಗಿದ್ದಾಳೆ. ದೇವಸ್ಥಾನಕ್ಕೆ ಬಂದು ಮಗಳನ್ನು ಕಳೆದುಕೊಂಡ ಲೋಕೇಶ್ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ.