ದೂದ್​ಸಾಗರ್ ಬಳಿ ಮೇಲೆ ಗುಡ್ಡ ಕುಸಿತ: ರೈಲು ಸಂಚಾರದಲ್ಲಿ ವ್ಯತ್ಯಯ, ಪ್ರವಾಸಿಗರಿಗೆ ನಿಷೇಧ

ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರವ ಹಿನ್ನೆಲೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್​ಸಾಗರ್ ಜಲಪಾತ ಬಳಿ ಗುಡ್ಡ ಕುಸಿತವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ನಿನ್ನೆ (ಜು.16) ಸಂಜೆ 6 ಗಂಟೆಗೆ ರೈಲು ಹಳಿಗಳ ಮೇಲೆ ಮಣ್ಣು, ಬಂಡೆ ಕುಸಿದ ಪರಿಣಾಮ 4 ಗಂಟೆಗಳ ಕಾಲ ಬೆಳಗಾವಿ-ಗೋವಾ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಜೆಸಿಬಿ ಸಹಾಯದಿಂದ ಟ್ರ್ಯಾಕ್ ಮೇಲೆ ಬಿದ್ದ ಮಣ್ಣು, ಬಂಡೆ ತೆರವು ಮಾಡಿದರು. ಬಳಿಕ ರೈಲುಗಳ ಸಂಚಾರ ಪುನಾರಂಭವಾಯಿತು.

ಸುಂದರವಾದ ದೂಧಸಾಗರ್ ಜಲಪಾತವನ್ನು ನೋಡಲು ವಾರಾಂತ್ಯ ನಿನ್ನೆ (ಜು.16) ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ತೆರಳಿದ್ದರು. ಅಲ್ಲದೇ ಟ್ರೆಕ್ಕಿಂಗ್​​ಗೆ ಅಂತ ತೆರಳಿದ್ದ ಯುವಕರಿಗೆ ರೈಲ್ವೇ ಪೊಲೀಸ್​ ಹಾಗೂ ಗೋವಾ ಪೊಲೀಸರು ಹೊಡೆಸಿ, ವಾಪಾಸ್ ಕಳುಹಿಸಿದ್ದರು.

ದೂಧ್ ಸಾಗರ್‌ಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ

ದೂಧ್ ಸಾಗರ್‌ಗೆ ತೆರಳದಂತೆ ಗೋವಾ ಸರ್ಕಾರ ಪ್ರವಾಸಿಗರಿಗೆ ಸೂಚನೆ ನೀಡಿದೆ. ಮಳೆಗಾಲ ಹಿನ್ನೆಲೆ‌ ಸುರಕ್ಷತೆ ಕಾರಣ ನೀಡಿ ಪ್ರವಾಸಿಗರಿಗೆ ಬ್ಯಾನ್ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೇ ಸಿಬ್ಬಂದಿಯನ್ನು ಗೋವಾ ಸರಕಾರ ಸ್ಥಳದಲ್ಲಿ ನಿಯೋಜನೆ ಮಾಡಿದೆ. ಗೋವಾದಿಂದ ಅನುಮತಿ ನೀಡಿದಲ್ಲಿ ಮಾತ್ರ ದೂದ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳಲು ಅನುಮತಿ ದೊರೆಯಲಿದೆ.