ರಾಯಚೂರು ಜು.17: ಇನ್ಸ್ಟಾಗ್ರಾಂನಲ್ಲಿ ಅನ್ಯಕೋಮಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ಹೆಚ್ ಕ್ಯಾಂಪ್ ಎರಡರಲ್ಲಿ ನಡೆದಿದೆ. ಹಿಂದೂ ಯುವಕರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಬರ್, ಶಾಮೀದ್, ತಾಜುದ್ದೀನ್, ಸಮೀರ್ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವತಿ ಹೆಸರಿನ ಖಾತೆ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಅನ್ಯಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ನಂತರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ಪೋಸ್ಟ್ ಸ್ಥಳೀಯ ವಾಟ್ಸಪ್ಗ್ರೂಪ್ಗಳಲ್ಲೂ ಹರದಾಡಿದೆ. ಹೀಗಾಗಿ ಈ ಪೋಸ್ಟ್ ಯಾರು ಹಾಕಿದ್ದಾರೆ ಎಂದು ಅನ್ಯಕೋಮಿನ ಯುವಕರು ವಿಚಾರಿಸಲೆಂದು ಆರ್ಹೆಚ್ ಕ್ಯಾಂಪ್ಗೆ ಆಗಮಿಸಿದ್ದಾರೆ.
ವಿಚಾರಿಸಲೆಂದು ಬಂದ ಅನ್ಯಕೋಮಿನ ಯುವಕರಲ್ಲಿ ಓರ್ವ ಆರ್ಹೆಚ್ ಕ್ಯಾಂಪ್ ಎರಡರ ದುರ್ಗಾದೇವಿ ದೇವಸ್ಥಾನದಲ್ಲಿ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿ, ಹಿಂದೂ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಈ ಹಿನ್ನೆಲೆ ಹಿಂದೂ ಯುವಕರು ಅನ್ಯಕೋಮಿನ 20 ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.