ವರ್ಗಾವಣೆಗೊಂಡ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಮರಿಯ ಕ್ರಿಸ್ತರಾಜ್ ಅವರಿಗೆ ಬೀಳ್ಕೊಡುಗೆ

ದಾಂಡೇಲಿ : ಧಾರವಾಡದ ಗುಂಗರಗಟ್ಟಿಯಲ್ಲಿರುವ ಕರ್ನಾಟಕ ಅರಣ್ಯ ಅಕಾಡೆಮಿಗೆ ವರ್ಗಾವಣೆಗೊಂಡಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಮರಿಯ ಕ್ರಿಸ್ತರಾಜ್ ಅವರಿಗೆ ನಗರದ ಹಳೆದಾಂಡೇಲಿಯಲ್ಲಿರುವ ಹಾರ್ನಬಿಲ್ ಭವನದಲ್ಲಿ ವನ್ಯಜೀವಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಮರಿಯಾ ಕ್ರಿಸ್ತರಾಜ್ ಅವರನ್ನು ಸನ್ಮಾನಿಸಿ ಮಾತನಾಡಿದ ಕೆನರಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಯವರು ಶಿಸ್ತು ಮತ್ತು ಆದರ್ಶ ನಡುವಳಿಕೆಗಳ ಮೂಲಕವೆ ಗಮನ ಸೆಳೆದಿರುವ ಮರಿಯ ಕ್ರಿಸ್ತರಾಜ್ ಅವರ ಕಾರ್ಯಶೈಲಿ, ಕೆಲಸದಲ್ಲಿ ಕ್ರಿಯಾಶೀಲತೆ ಮತ್ತು ಬದ್ಧತೆ ಅನುಕರಣೀಯ. ದೂರದೃಷ್ಟಿ ಯೋಚನೆ ಮತ್ತು ಯೋಜನೆಗಳನ್ನು ಹೊಂದಿರುವ ಪ್ರಾಮಾಣಿಕ ಅಧಿಕಾರಿಯಾಗಿ ವನ್ಯಜೀವಿ ವಿಭಾಗವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶ ನಡವಳಿಕೆಗಳು ಪ್ರೇರಣೆಯಾಗಿದೆ ಎಂದು ಹೇಳಿ ಶುಭವನ್ನು ಹಾರೈಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮರಿಯ ಕ್ರಿಸ್ತರಾಜ್ ಅವರು ಸರಕಾರಿ ಕೆಲಸದಲ್ಲಿ ವರ್ಗಾವಣೆ, ನಿವೃತ್ತಿ ಸಹಜ ಪ್ರಕ್ರಿಯೆ. ನಾವು ಎಲ್ಲಿ ಕೆಲಸ ಮಾಡುತ್ತೇವೆಯೊ ಅಲ್ಲಿ ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯಿರಬೇಕು. ನಮಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಟೆಯಿಂದ ಮಾಡಿದಾಗ ಮಾತ್ರ ನಾವು ತೆಗೆದುಕೊಳ್ಳುವ ವೇತನಕ್ಕೆ ನಿಜವಾದ ಅರ್ಥಬರಲು ಸಾಧ್ಯವಿದೆ. ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮೇಲಾಧಿಕಾರಿಗಳು ನೀಡಿದ ಮಾರ್ಗದರ್ಶನ ಅದೇ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನೀಡಿದ ಸಹಕಾರ ಸದಾ ಸ್ಮರಣೀಯ ಎಂದು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಕೆನರಾ ವೃತ್ತದ ವಿವಿದೆಡೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿ.ಎಚ್.ಬಾಲಚಂದ್ರ, ರವಿಶಂಕರ್, ಪ್ರಶಾಂತ್, ಅಜ್ಜಯ್ಯ, ಎಸ್.ಜಿ.ಹೆಗಡೆ, ಮಂಜುನಾಥ್ ನಾವಿ, ನಿಲೇಶ್ ಶಿಂಧೆ ಮೊದಲಾದವರು ಉಪಸ್ಥಿತರಿದ್ದು, ಮರಿಯ ಕ್ರಿಸ್ತರಾಜ್ ಅವರ ಕರ್ತವ್ಯಬಧ್ದತೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಕೆನರಾ ವೃತ್ತದ ಅಧಿಕಾರಿಗಳು, ಸಿಬ್ಬಂದಿಗಳು, ವನ್ಯಜೀವಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ವಲಯಾರಣ್ಯಾಧಿಕಾರಿ ಬಸವರಾಜ್.ಎಂ. ಸ್ವಾಗತಿಸಿ, ವಂದಿಸಿದರು.