ರೋಟರಿ ಸಭಾಭವನದಲ್ಲಿ ಚೆಸ್ ತರಬೇತಿ ಕಾರ್ಯಕ್ರಮ

ದಾಂಡೇಲಿ : ನಗರದ ರೋಟರಿ ಕ್ಲಬ್ ಆಶ್ರಯದಡಿ ರೋಟರಿ ಶಾಲೆಯ ಸಭಾ ಭವನದಲ್ಲಿ ದಾಂಡೇಲಿ ತಾಲ್ಲೂಕಿನ ಆಸಕ್ತ ವಿದ್ಯಾರ್ಥಿಗಳಿಗೆ ಒಂದು ದಿನದ ಚೆಸ್ ತರಬೇತಿ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬಿನ ಅಧ್ಯಕ್ಷರಾದ ಜೋಸೆಫ್ ಗೋನ್ಸಾಲಿಸ್ ಚೆಸ್ ಗೇಮ್ ಒಂದು ಮೈಂಡ್ ಗೇಮ್. ಮೆದುಳಿನ ಶಕ್ತಿಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಚೆಸ್ ಅತ್ಯಂತ ಪರಿಣಾಮಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸುವ ವಿಚಾರವಿದ್ದು, ಆ ನಿಟ್ಟಿನಲ್ಲಿ ಇಂದು ಪ್ರಾಯೋಗಿಕವಾಗಿ ಚೆಸ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚೆಸ್ ರಾಷ್ಟ್ರೀಯ ತಂಡದ ಮಾಜಿ ಆಟಗಾರ ರಾಮಚಂದ್ರ ಭಟ್ ಅವರು ಏಕಾಗ್ರತೆ ಮತ್ತು ಮನೋಮಟ್ಟವನ್ನು ಹೆಚ್ಚಿಸುವಲ್ಲಿ ಚೆಸ್ ಆಟ ಅತ್ಯುತ್ತಮವಾಗಿದೆ. ಚೆಸ್ ಆಟಕ್ಕೆ ಏಕಾಗ್ರತೆ ಮತ್ತು ತಾಳ್ಮೆ ಅತೀ ಮುಖ್ಯ. ಚೆಸ್ ಆಟದಿಂದ ಉತ್ತಮ ಜೀವನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.

ವೇದಿಕೆಯಲ್ಲಿ ರೋಟರಿ ಕ್ಲಬಿನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬಿನ ಪ್ರಧಾನ ಕಾರ್ಯದರ್ಶಿ ಅಶುತೋಷ್ ರಾಯ್, ರೋಟರಿ ಕ್ಲಬಿನ ಹಿರಿಯ ಪದಾಧಿಕಾರಿ ಲಿಯೋ ಪಿಂಟೋ, ಹಿರಿಯ ಚೆಸ್ ಆಟಗಾರ ಹಾಗೂ ಉದ್ಯಮಿ ನವೀನ್ ಕಾಮತ್ ಮತ್ತು ಉದ್ಯಮಿ ಮನೋಹರ್ ಕದಂ ಅವರು ಉಪಸ್ಥಿತರಿದ್ದರು.

ತರಬೇತಿಯಲ್ಲಿ ದಾಂಡೇಲಿ ತಾಲ್ಲೂಕಿನ 25 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚೆಸ್ ರಾಷ್ಟ್ರೀಯ ತಂಡದ ಮಾಜಿ ಆಟಗಾರ ರಾಮಚಂದ್ರ ಭಟ್ ಅವರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತರಬೇತಿಯನ್ನು ನೀಡಿ ಗಮನ ಸೆಳೆದರು.