ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆಯಾದ ಮೇಲೆ ಹೇಳಿಕೆಗಳನ್ನು ನೀಡುವುದರಿಂದ ಪ್ರಯೋಜನ ಏನು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಪ್ರತಿ ವ್ಯಕ್ತಿಯ ಕೊಲೆಯಾದ ಮೇಲೆ ಮೈ ಕೊಡವಿಕೊಂಡು ಎದ್ದೇಳುವ ಬಿಜೆಪಿ ಸರ್ಕಾರ, ಏಕೆ ಕೊಲೆಯಾಗದಂತೆ ಪ್ರಯತ್ನ ಮಾಡುತ್ತಿಲ್ಲ.? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದ್ದು, ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸಿದೆ ಎಂದು ಹೇಳಿದ್ದಾರೆ.
ಪ್ರತಿಬಾರಿಯೂ ಬಡ ಯುವಕರೇ ಏಕೆ ಬಲಿಪಶುಗಳಾಗುತ್ತಿದ್ದಾರೆ.? ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂಥ ಗಲಾಟೆಗಳಲ್ಲಿ ಕಾಣುವುದಿಲ್ಲ. ಕೊಲೆಗಡುಕ ಶಕ್ತಿಗಳ ಮುಂದೆ ಸರ್ಕಾರ ಕೋಲೆ ಬಸವನಂತಾಗಿದೆ. ಪ್ರತಿ ಕೊಲೆಗಳ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.