ತುಮಕೂರು: ಕಲುಷಿತ ನೀರು (Contaminated Water) ಕುಡಿದು ಮಾಡಿ 15 ಮಂದಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಬಸ್ಸರಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥ ಕೂಲಿಕಾರ್ಮಿಕರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದ ಬೆಸ್ತರಹಳ್ಳಿ ಬಳಿ ನಿನ್ನೆ (ಜುಲೈ 15) ಕಲುಷಿತ ನೀರು ಸೇವಿಸಿ 15 ಜನರು ಅಸ್ವಸ್ಥಗೊಂಡಿದ್ದರು. ಈ ಪೈಕಿ 14 ಮಂದಿಯನ್ನು ಗ್ರಾಮದ ಸರ್ಕಾರಿಗೆ ಆಸ್ಪತ್ರೆಗೆ ದಾಖಲಿಸಿದ್ದರೆ, ಒಬ್ಬನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸ್ಥಳೀಯ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ವೈಎನ್ ಹೊಸಕೋಟೆ ಗ್ರಾಮದಲ್ಲಿ ನೀರು ಸರಬರಾಜು ಸಂಪರ್ಕದ 30 ಗೇಟ್ವಾಲ್ಗಳಿವೆ. ಇವುಗಳಲ್ಲಿ ಕೆಲವೊಂದು ಸೋರಿಕೆಯಾಗುತ್ತಿದ್ದು, ಗುಂಡಿಯಲ್ಲಿ ಶೇಕರಣೆಯಾದ ಕಸ-ಕಡ್ಡಿ ಮತ್ತು ನೀರು ಕೊಳೆತು ಮತ್ತೆ ನಳಗಳಿಗೆ ಸೇರುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಸಮಸ್ಯೆ ನಿವಾರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗಷ್ಟೇ, ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ನಾಗ ಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 33 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರ ಇರುವ ಕೆಲವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.