ಕಾವೇರಿ ಕ್ಯಾತೆ: ಇಲ್ಲೇ ನೀರಿನ ಸಮಸ್ಯೆ ಇದೆ, ತಮಿಳುನಾಡಿಗೆ ನೀರು ಬಿಡಲಾಗುತ್ತಿಲ್ಲ ಎಂದ ಸಚಿವ ಎನ್​​ ಚಲುವರಾಯಸ್ವಾಮಿ

ಮಂಡ್ಯ: ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಮತ್ತೆ ಕ್ಯಾತೆ ತೆಗೆಯಲಾಗಿದೆ. ಕರ್ನಾಟಕದಿಂದ ನೀರು ಹರಿಸುವಂತೆ ಮಾನಿಟರ್ ಕಮಿಟಿ ಮುಂದೆ ತಮಿಳುನಾಡು ಮನವಿ ಮಾಡಿದೆ. ಆದರೆ ಇಲ್ಲಿ ನೀರಿನ ಸಮಸ್ಯೆ ಇದೆ. ಹಾಗಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರು ಹರಿಸುವಂತೆ ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡು ಅರ್ಜಿ ಸಲ್ಲಿಸಿದೆ ಎಂದರು.

ನಮ್ಮಲ್ಲೇ ಬೆಳೆಗಳಿಗೂ ಸಮಸ್ಯೆಯಾಗುತ್ತಿದೆ. ನೀರಾವರಿ ಸಚಿವರ ಜತೆ ಮತ್ತು ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಸಭೆ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿ ಬಂದಿದ್ದೇವೆ. ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳ ಒಳಗೆ ಒಳ್ಳೆಯ ಮಳೆ ಬರಲಿದೆ ಎಂಬ ವರದಿ ಇದೆ. ಆಶಾದಾಯಕವಾಗಿ ಇರಬೇಕಾದ ಅನಿರ್ವಾಯತೆ ಇದೆ. ಕೆಆರ್​ಎಸ್​ನ ಒಳಹರಿವು ಕೂಡ ಕಡಿಮೆ ಆಗಿದೆ. ಸಮಸ್ಯೆಯಂತೂ ಇದೆ ಎಂದು ಹೇಳಿದರು.

ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡುವುದು, ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡುತ್ತದೆ. ಕ್ಯಾಬಿನೆಟ್ ಸಬ್ ಕಮಿಟಿ ಈಗಾಗಲೇ ಒಂದು ಸಭೆ ಮಾಡಿದೆ. ಕೆಲವೊಂದು ಮಾನದಂಡದ ನಂತರ ಬರಗಾಲ ಘೋಷಣೆ ಮಾಡಲಾಗುವುದು ಎಂದರು.