ಬೆಂಗಳೂರು: ಬೆಂಗಳೂರು ನಗರದ ಜನನಿಬಿಡ ರಸ್ತೆಯೊಂದರಲ್ಲಿ ಮರವೊಂದು ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ರೀತಿಯ ಘಟನೆ ಇದೇ ಮೊದಲು ಅಥವಾ ಕೊನೆಯದಲ್ಲ. ಮಳೆಗಾಲದ ಸಂದರ್ಭದಲ್ಲಿ ನಗರದಲ್ಲಿ ಇಂಥ ಘಟನೆಗಳು ಸಂಭವಿಸಿದ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ಹಾನಿಯಾಗಿರುವುದಕ್ಕೆ ವಿಮಾ ಪರಿಹಾರ ದೊರೆಯುತ್ತದೆಯೇ?
ಇಂಥ ಪ್ರಕರಣದಲ್ಲಿ, ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲು ನಿಗಮ ಅಥವಾ ಪುರಸಭೆ ನಿರ್ಧರಿಸಬಹುದು ಎಂದು ಸಾಮಾನ್ಯ ವಿಮಾ ಸಲಹೆಗಾರ ಮತ್ತು ತಜ್ಞ ಹರಿ ರಾಧಾಕೃಷ್ಣನ್ ಹೇಳಿರುವುದಾಗಿ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಯಾವುದೇ ಸಮಯದಲ್ಲಿ ಇಂತಹ ಘಟನೆಗಳು ಸಂಭವಿಸಬಹುದು. ಮುಂಗಾರು ಮಳೆಯ ಸಂದರ್ಭದಲ್ಲಿ ಈ ರೀತಿಯ ಘಟನೆಗಳನ್ನು ಸಂಪೂರ್ಣ ತಪ್ಪಿಸುವುದು ಅಸಾಧ್ಯ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಪರಿಹಾರ ಪಡೆಯಲು ವಿಮೆ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.
ಮೇಲೆ ತಿಳಿಸಿದ ಘಟನೆಗೆ ಕಾರಣವಾದ ಮರವು ಸಾರ್ವಜನಿಕ ಆಸ್ತಿಯಾಗಿದೆ (ರಸ್ತೆ). ಮನೆ ಅಥವಾ ಆಸ್ತಿಯ ಮಾಲೀಕರಿಗೆ ಮರ ಬೀಳುವಿಕೆ / ತೆಂಗಿನಕಾಯಿ ಬೀಳುವಿಕೆ ಇತ್ಯಾದಿಗಳಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ಪಡೆಯಲು ವಿಮೆ ಒಂದು ಉತ್ತಮ ಮಾರ್ಗವಾಗಿದೆ ಎಂದು ರಾಧಾಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಮರವು ಖಾಸಗಿ ಆಸ್ತಿ ಅಥವಾ ಮನೆಯಿಂದ ಆವರಣದಲ್ಲಿದ್ದು ಅದು ಬಿದ್ದಿದ್ದರೆ ಆಸ್ತಿ ಅಥವಾ ಮನೆಯ ಮಾಲೀಕರು ಜವಾಬ್ದಾರರಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ಆಸ್ತಿ ಅಥವಾ ಮನೆ ಮಾಲೀಕರು ಗೃಹ ವಿಮಾ ರಕ್ಷಣೆಯನ್ನು ಹೊಂದಿರಬೇಕು.
ದುರದೃಷ್ಟವಶಾತ್ ಭಾರತದಲ್ಲಿ ಆಸ್ತಿ ಅಥವಾ ಮನೆ ಮಾಲೀಕರು ಅಂತಹ ಗೃಹ ವಿಮಾ ರಕ್ಷಣೆಯನ್ನು ಹೊಂದಿಲ್ಲ ಮತ್ತು ಇವುಗಳ ಬಗ್ಗೆ ಮಾಹಿತಿ ಇರುವವರು ಕಡಿಮೆ ಎಂದು ರಾಧಾಕೃಷ್ಣನ್ ವಿಷಾದ ವ್ಯಕ್ತಡಿಸಿದ್ದಾರೆ.
ಆಸ್ತಿ ಹಾಗೂ ಮನೆ ಮಾಲೀಕರು ಮಾಡಿಸುವ ಗೃಹ ವಿಮಾ ರಕ್ಷಣೆಯಲ್ಲಿ ಸಾರ್ವಜನಿಕ ಹೊಣೆಗಾರಿಕೆಯ ಷರತ್ತನ್ನು ಸಹ ಸೇರಿಸಬೇಕು ಎನ್ನುತ್ತಾರೆ ರಾಧಾಕೃಷ್ಣನ್.
ಖಾಸಗಿ ಆಸ್ತಿಯಿಂದ ರಸ್ತೆಗೆ ಮರ ಬೀಳುವ ಸಂದರ್ಭದಲ್ಲಿ ಆಸ್ತಿಗೆ (ಕಾರುಗಳು / ವಾಹನಗಳು) ಆಗುವ ಹಾನಿಗೆ ಖಾಸಗಿ ಆಸ್ತಿದಾರರನ್ನೇ ಹೊಣೆಗಾರಿಕೆ ಮಾಡಿ ಸಾರ್ವಜನಿಕ ಹೊಣೆಗಾರಿಕೆ ಷರತ್ತು ವಿಧಿಸಬೇಕು ಎಂದು ಅವರು ಹೇಳಿದ್ದಾರೆ.