ಯಲ್ಲಾಪುರದಲ್ಲಿ ಯಕ್ಷಮಿತ್ರ ವೃಂದ ಮಾಗೋಡ ಆಶ್ರಯದಲ್ಲಿ ಪ್ರಸಂಗ ಪಂಚಕ ಕಾರ್ಯಕ್ರಮ

ಯಲ್ಲಾಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಶಾಡ ಏಕಾದಶಿಯ 2ನೇ ಏಕಾದಶಿ ಪ್ರಯುಕ್ತ ಯಕ್ಷಮಿತ್ರ ವೃಂದ ಮಾಗೋಡ ಆಶ್ರಯದಲ್ಲಿ ಪ್ರಸಂಗ ಪಂಚಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೊರಗೆ ಜಿಟಿಜಿಟಿ ಮಳೆ, ಒಳಗೆ ತಂಪಾದ ವಾತಾವರಣ ಒಳಗೆ. ಬಿಸಿ ಬಿಸಿ ಚಹಾ, ಹೊಟ್ಟೆ ತಣಿಸುವುದಕ್ಕೆ ರೊಟ್ಟಿ, ಸಿಹಿ ಲಾಡು, ಅವಲಕ್ಕಿ, ಆಗಾಗ ಸಿಗುವ ಪನಿವಾರ, ಚಕ್ಕುಲಿ, ಗರಗರಿ ಶೇಂಗಾ, ಇದೆಲ್ಲ ಒಂದೆಡೆಯಾದ್ರೇ, ಇದನ್ನೆಲ್ಲವನ್ನು ಮೀರಿಸುವ ನಿರಂತರ 12 ತಾಸು ತಾಳಮದ್ದಲೆ, ಜಾಂಬವತಿ ಕಲ್ಯಾಣ, ಕೃಷ್ಣ ಸಂಧಾನ, ಕರ್ಣ ಬೇಧನ, ಕರ್ಣಾವಸಾನ ಹಾಗೂ ವಾಲಿ ಮೋಕ್ಷ ಪ್ರಸಂಗಗಳು ಪ್ರದರ್ಶನಗೊಂಡವು…

ತಾಳಮದ್ದಲೆಯನ್ನು ಹೀಗೂ ಸಂಯೋಜನೆ ಮಾಡಬಹುದೆಂಬ ಹೊಸ ಆಲೋಚನೆಯನ್ನು ಈ ಸಂಘಟನೆ ತೋರಿಸಿಕೊಟ್ಟಿತು. ಹವ್ಯಾಸಿ, ವೃತ್ತಿ ಕಲಾವಿದರನ್ನೊಳಗೊಂಡು ಮಾಗೋಡ ಭಾಗದ 35 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಮಾಗೋಡ, ನಂದೊಳ್ಳಿ ಭಾಗದಲ್ಲೇ ಇಷ್ಟೊಂದು ಸಂಖ್ಯೆಯಲ್ಲಿ ಹಿಮ್ಮೇಳ, ಮುಮ್ಮೇಳದ ಕಲಾವಿದರು ಲಭ್ಯರಿರುವುದು ವಿಶೇಷ ಸಂಗತಿ. ಪ್ರಸಂಗದ ಆಯ್ಕೆ, ಕಲಾವಿದರ ಆಯ್ಕೆ ಎಲ್ಲವೂ ಅಷ್ಟು ಅಚ್ಚುಕಟ್ಟಾಗಿತ್ತು. ಅದರಲ್ಲಿಯೂ ಹಿಮ್ಮೇಳ, ಮುಮ್ಮೇಳದ ಪ್ರತಿ ಕಲಾವಿದರು ಸಮಯ ಪಾಲನೆಯ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದಾರೆ..

ಬಂದ ಯಾವ ಪ್ರೇಕ್ಷಕರು, ಕಲಾವಿದರು ಹಸಿದು ಹೋಗಬಾರದು ಎಂಬ ನೆಲೆಯಲ್ಲಿ ಬೆಳಗಿನವರೆಗೂ ತಿಂಡಿ, ಚಹಾ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರು, ಪ್ರೇಕ್ಷಕರು ತಾವೂ ಸಂಘಟನೆಯಲ್ಲಿ ಒಬ್ಬರೆಂಬಂತೆ ಚಹಾ ವಿತರಣೆ, ಬಡಿಸುವುದು ಎಲ್ಲದರಲ್ಲೂ ತೊಡಗಿಕೊಂಡದ್ದು ವಿಶೇಷವಾಗಿತ್ತು. ಮಳೆಗಾಲದಲ್ಲಿ ರಕ್ತ ಹೀರುವ ನೊರಜುಗಳು ಬಂದ ಪ್ರೇಕ್ಷಕರಿಗೆ, ಕಲಾವಿದರಿಗೆ ರಸಾಸ್ವಾದಕ್ಕೆ ಭಂಗ ತಂದೀತೆಂದು ಮೊದಲೇ ಯೋಚಿಸಿದ ಸಂಘಟಕರು, ಅದನ್ನು ಹೋಗಲಾಡಿಸಲು ಅಡಕೆ ಸಿಪ್ಪೆಯ ಹೊಗೆಯ ವ್ಯವಸ್ಥೆ ಮಾಡಿದ್ದರು

ಒಟ್ಟಾರೆ ಆಶಾಢ ಏಕಾದಶಿಯ ಪ್ರಸಂಗ ಪಂಚಕ ಕಾರ್ಯಕ್ರಮ ಕಲಾರಾಧನೆಯೊಂದಿಗೆ, ಉತ್ತಮ ಸಂಘಟನೆಗೆ ಮಾದರಿಯಾಯ್ತು….

ಶ್ರೀಧರ್‌ ಅಣಲಗಾರ್‌, ನುಡಿ ಸಿರಿ ನ್ಯೂಸ್‌, ಯಲ್ಲಾಪುರ