ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರ ಫ್ಲಾಟ್‌ನಲ್ಲಿ ಶವ ಪತ್ತೆಯಾಗಿದೆ. ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ಅವರು ಬಹಳ ದಿನಗಳಿಂದ ವಾಸವಾಗಿದ್ದರು. ಅವರು ಉಳಿದುಕೊಂಡಿದ್ದ ಫ್ಲಾಟ್‌ನಿಂದ ಇತ್ತೀಚೆಗೆ ದುರ್ವಾಸನೆ ಬರಲು ಆರಂಭ ಆಗಿತ್ತು. ಸ್ಥಳಿಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಗಿ ನೋಡಿದಾಗ ರವೀಂದ್ರ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು ಮೂರು ದಿನಗಳ ಹಿಂದೆ ರವೀಂದ್ರ ಅವರು ಸಾವನ್ನಪ್ಪಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಫ್ಲಾಟ್‌ನಿಂದ ದುರ್ವಾಸನೆ ಬರಲಾರಂಭಿಸಿದ ಬಳಿಕ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ರವೀಂದ್ರ ಮೃತಪಟ್ಟ ವಿಚಾರ ಗೊತ್ತಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರವೀಂದ್ರ ಅವರು ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 70 ರಿಂದ 80ರ ದಶಕದ ನಡುವೆ ಅನೇಕ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಆದಾಗ್ಯೂ, ಆರಂಭದಲ್ಲಿ ಅವರು ಆರ್ಥಿಕವಾಗಿ ತೊಂದರೆ ಎದುರಿಸಿದರು. ಅವರು ಹಣ ಕೂಡಿಸಲು ಟ್ಯಾಕ್ಸಿ ಓಡಿಸುತ್ತಿದ್ದರು. ಬಳಿಕ ಅವರು ಜನಪ್ರಿಯತೆ ಪಡೆದರು. ಅವರನ್ನು ಮರಾಠಿ ಚಿತ್ರರಂಗದ ವಿನೋದ್ ಖನ್ನಾ ಎಂದು ಕರೆಯಲಾಯಿತು. ಮರಾಠಿ ಮಾತ್ರವಲ್ಲದೆ, ಗುಜರಾತಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ಶುಕ್ರವಾರ ಸಂಜೆ 4.30ರ ಸುಮಾರಿಗೆ ರವೀಂದ್ರ ಅವರ ನೆರೆಹೊರೆಯವರು ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ಈ ವೇಳೆ ಅವರಿಗೆ ರವೀಂದ್ರ ಅವರ ಫ್ಲ್ಯಾಟ್ನಿಂದ ವಾಸನೆ ಬಂದಿದೆ. ಬಾಗಿಲು ತಟ್ಟಿದಾಗ ಅದು ಒಳಗಿನಿಂದ ಲಾಕ್ ಆಗಿತ್ತು. ಸ್ಥಳೀಯರ ಸಮ್ಮುಖದಲ್ಲಿ ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಶವ ಕಂಡಿದೆ. ಅಪಾರ್ಟ್‌ಮೆಂಟ್ ಮಾಲೀಕರು ಮೃತರನ್ನು ರವೀಂದ್ರ ಎಂದು ಗುರುತಿಸಿದ್ದಾರೆ.
ಮಗನೂ ಹೀರೋ
ರವೀಂದ್ರ ಅವರ ಮಗ ಗಶ್ಮೀರ್ ಮಹಾಜನಿ ಕೂಡ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಮರಾಠಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಂದೆಯ ಸಾವಿನ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.