ಆಸ್ತಿ ವಿವಾದದಲ್ಲಿ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ; ಎಸ್ಪಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ದಾವಣಗೆರೆ: ಆಸ್ತಿ ವಿವಾದ ಸಂಬಂಧ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಹಿನ್ನಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಶಿವಕುಳೆನೂರ ಗ್ರಾಮದ ನಿವಾಸಿ ವೇದಾವತಿ(55) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಅಸ್ವಸ್ಥ ವೇದಾವತಿ ಎಂಬುವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಮಹಿಳೆ ಸಾಗುವಳಿ ಮಾಡುತ್ತಿದ್ದ 5 ಎಕರೆ ಜಮೀನು ವಿಚಾರವಾಗಿ ಸಂಬಂಧಿಯಾದ ಕಾನ್ಸ್​ಟೇಬಲ್ ವೆಂಕಟೇಶ್​ ನಡುವೆ ಜಗಳ ನಡೆಯುತ್ತಿತ್ತು. ಪೊಲೀಸ್ ಪ್ರಭಾವ ಬಳಸಿ ನಮಗೆ ಬಿತ್ತನೆ ಮಾಡಲು ಬಿಡುತ್ತಿಲ್ಲ ಎಂದು ಎಸ್​ಪಿ ಬಳಿ ದೂರು ನೀಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

ಸೂಕ್ತ ಕ್ರಮದ ಭರವಸೆ ನೀಡಿದ ದಾವಣಗೆರೆ ಎಸ್ಪಿ

ಇನ್ನು ಕಾನ್ಸ್​​ಟೇಬಲ್ ವೆಂಕಟೇಶ್ ಕಿರುಕುಳಕ್ಕೆ ಬೇಸತ್ತಿದ್ದ ಮಹಿಳೆ ಎಸ್ಪಿ ಕಚೇರಿಗೆ ಹೋಗುವ ಮೊದಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆಕೆಯನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿನ್ನಲೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಪ್ರಕರಣದ ಬಗ್ಗೆ ಮಾಹಿತಿ ಪಡೆದ ದಾವಣಗೆರೆ ಎಸ್ಪಿ ಡಾ.ಕೆ ಅರುಣ್ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ಘಟನೆ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.