ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇಗೆ ತೆರಳಿದ ಪ್ರಧಾನಿ ಮೋದಿ

ದೆಹಲಿ, ಜುಲೈ 15: ಪ್ರಧಾನಿ ಮೋದಿ ಅವರು ಫ್ರಾನ್ಸ್​ ಪ್ರವಾಸ ಮುಗಿಸಿ, ಇದೀಗ ಯುಎಇಗೆ ತೆರಲಿದ್ದಾರೆ. ಫ್ರಾನ್ಸ್​​ನಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿ ಮೊದಲೇ ನಿಗದಿಯಾಗಿರುವಂತೆ, ಇಂದು (ಜುಲೈ 15) ಯುಎಇಗೆ ಪಯಣ ಬೆಳೆಸಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದ್ದು, ಅಲ್ಲಿನ ಸಿಇಒಗಳ ಜತೆಗೂ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ನೀಡುವ ಮೂಲಕ​​ ಪ್ರಧಾನಿ ಮೋದಿ ಅವರನ್ನು ಗೌರವಸಿದ್ದಾರೆ.

ಪ್ರಧಾನಿ ಮೋದಿ ಅವರ ಈ ಭೇಟಿ ಭಾರತ-ಫ್ರಾನ್ಸ್ ಬಾಂಧವ್ಯಕ್ಕೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ಇದೀಗ ಮೋದಿ ಅವರು ಫ್ರಾನ್ಸ್‌ಗೆ ವಿದಾಯ ಹೇಳಿದ್ದಾರೆ. ಪ್ರಧಾನಿ ಈಗ ಅಬುಧಾಬಿಗೆ ಪ್ರಯಾಣಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಅಬುಧಾಬಿ ಭೇಟಿಯಲ್ಲಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಇಂಧನ, ಆಹಾರ ಭದ್ರತೆ ಮತ್ತು ರಕ್ಷಣೆಯು ಕೇಂದ್ರೀಕೃತ ಪ್ರದೇಶಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇಬ್ಬರು ಹಲವು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿದೆ.