ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

ಪ್ಯಾರಿಸ್‌: ಇನ್ನು ಮುಂದೆ ಫ್ರಾನ್ಸ್‌ನಲ್ಲಿರುವ ಅನಿವಾಸಿ ಭಾರತೀಯರು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಬಳಸಿಕೊಂಡು ಭಾರತಲ್ಲಿರುವ ಸಂಬಂಧಿಕರಿಗೆ ಹಣವನ್ನು ಕಳುಹಿಸಬಹುದು ಜೊತೆಗೆ ಭಾರತದಿಂದ ತೆರಳಿದ ಪ್ರವಾಸಿಗರು ರೂಪಾಯಿಯಲ್ಲೇ ವ್ಯವಹಾರ ನಡೆಸಬಹುದು.

ಹೌದು. ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್‌ನಲ್ಲೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್ ಮತ್ತು ಭಾರತ ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗಲಿದೆ. ಭಾರತದ ಪ್ರವಾಸಿಗರು ಫ್ರಾನ್ಸಿನಲ್ಲಿ ರೂಪಾಯಿ ಮೂಲಕವೇ ವ್ಯವಹಾರ ನಡೆಸಬಹುದು ಎಂದು ಹೇಳಿದರು.

ಯುಪಿಐ ಭಾರತದ ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದೆ. ಇದು ಗ್ರಾಹಕರು ರಚಿಸಿದ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಗ್ರಾಹಕರಿಗೆ ಹಣ ಪಾವತಿಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡಿಕೊಡುತ್ತದೆ.

2022 ರಲ್ಲಿನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಫ್ರಾನ್ಸ್‌ನಲ್ಲಿರುವ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಲೈರಾದ ಜೊತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿತ್ತು. ಈಗಾಗಲೇ ಯುಪಿಐ ಮತ್ತು ಸಿಂಗಾಪುರದ ಪೇನೌ ಅಧಿಕೃತವಾಗಿ ಲಿಂಕ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸೀನ್‌ ಲೂಂಗ್‌ ಅವರು 2021ರಲ್ಲಿ ಈ ವ್ಯವಸ್ಥೆಗೆ ಆನ್‌ಲೈನ್‌ನಲ್ಲಿ ಜೊತೆಯಾಗಿ ಚಾಲನೆ ನೀಡಿದ್ದರು.

ಫ್ರಾನ್ಸ್‌ನಲ್ಲಿ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸುವುದು ಎಂದರೆ ಭಾರತೀಯ ಪ್ರವಾಸಿಗರು ಯುಪಿಐ ಮೂಲಕ ಫ್ರಾನ್ಸ್‌ನಲ್ಲಿ ರೂಪಾಯಿಯಲ್ಲಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಯುರೋಪ್‌ಗೆ ಭೇಟಿ ನೀಡುವ ಭಾರತೀಯರು ತಮ್ಮ ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಫ್ರಾನ್ಸ್‌ನಲ್ಲಿ ಸ್ಥಳೀಯ ಕ್ಯೂಆರ್‌ ಕೋಡ್‌ ಅಥವಾ ಯುಪಿಐ ಐಡಿಯನ್ನು ಬಳಸಿಕೊಂಡು ರೂಪಾಯಿಯಲ್ಲಿ ತಮ್ಮ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

ಲಾಭ ಏನು?
ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. ಯುಪಿಐ ಮತ್ತು ಲೈರಾ ಸಂಪರ್ಕವೂ ಭಾರತ ಮತ್ತು ಫ್ರಾನ್ಸ್‌ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಫ್ರಾನ್ಸ್‌ನಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.