ಬೆಂಗಳೂರು: ಜು.7 ರಂದು ರಾಜ್ಯ ಬಜೆಟ್ ಮಂಡನೆ ವೇಳೆ ತಿಪ್ಪೇರುದ್ರಪ್ಪ ಎಂಬ ವ್ಯಕ್ತಿ ಸದನದ ಒಳಗೆ ಪ್ರವೇಶಿಸಿ, ಶಾಸಕರ ಸ್ಥಾನದಲ್ಲಿ ಕೂತಿದ್ದು ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇದಾದ ನಂತರ ಎಚ್ಚೆತ್ತುಕೊಂಡ ಪೊಲೀಸರು ವಿಧಾನಸೌಧದಲ್ಲಿನಕಲಿ ಪಾಸ್ಗಳ ಹಾವಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ನಕಲಿ ಪಾಸ್ಗಳನ್ನು ಬಳಸಿ ವಿಧಾನಸೌಧದ ಒಳಗೆ ಆಗಮಿಸುತ್ತಿರುವವರನ್ನು ತಡೆದಿದ್ದಾರೆ.
ಹೌದು ವಿಧಾನಸೌಧ ಭದ್ರತೆ ಗಂಭೀರವಾಗಿ ಪರಿಗಣಿಸಿದ ಭದ್ರತಾ ಪೊಲೀಸರು, ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ ಮುನ್ನೂರಕ್ಕು ಹೆಚ್ಚು ನಕಲಿ ಪಾಸ್ ಪತ್ತೆಹಚ್ಚಿದ್ದಾರೆ. ಅಧಿಕೃತ ಪಾಸ್ಗಳನ್ನು ಕಲರ್ ಜೆರಾಕ್ಸ್, ಓಲ್ಡ್ ಪಾಸ್ಗಳು, ಅವಧಿ ಮುಗಿದಿರುವ ಪಾಸ್ಗಳು, ಮತ್ತು ವಾಹನಗಳ ನಕಲಿ ಪಾಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಧಾನಸೌದಕ್ಕೆ ಎಂಟ್ರಿಯಾಗುವ ಎಲ್ಲಾ ಗೇಟ್ಗಳಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಕಲಿ ಪಾಸ್ ಬಳಸಿ ವಿಧಾನಸೌಧ ಒಳ ಪ್ರವೇಶ ಮಾಡುತ್ತಿದ್ದವರಿಗೆ ತಡೆದಿದ್ದಾರೆ. ಇದೀಗ ಪೊಲೀಸರು ಅವಧಿ ಮುಗಿದಿರುವ ಪಾಸ್, ಕಲರ್ ಜೆರಕ್ಸ್ ಪಾಸ್ಗಳನ್ನು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಮಾಜಿ ಎಂಎಲ್ಎ, ಎಂಎಲ್ಸಿ ಪಾಸ್ಗಳೇ ನಕಲಿಯಾಗಿದ್ದು ಆಘಾತಕಾರಿ ಸಂಗತಿಯಾಗಿದೆ. ಇದೀಗ ಪೊಲೀಸರು 300 ಕ್ಕೂ ಹೆಚ್ಚು ನಕಲಿ ಪಾಸ್ಗಳನ್ನು ವಶಕ್ಕೆ ಪಡೆದಿದ್ದು, ಈ ನಕಲಿ ಪಾಸ್ಗಳ ಹಿಂದಿನ ಉದ್ದೇಶ ಏನಾಗಿತ್ತು ಎಂದು ತನಿಖೆ ನಡೆಸುತ್ತಿದ್ದಾರೆ.