ಚಾಮರಾಜನಗರ: ಕೌಟುಂಬಿಕ ಕಲಹ ಹಿನ್ನಲೆ ಮಕ್ಕಳಿಗೆ ಊಟದಲ್ಲಿ ವಿಷ ಬೆರಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹೆತ್ತ ತಾಯಿ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಗು ಸಾವನ್ನಪ್ಪಿದೆ.
ಕೌಟುಂಬಿಕ ಕಲಹದಿಂದ ನೊಂದಿದ್ದ ತಾಯಿ ತನ್ನ ಹೆತ್ತ ಮಕ್ಕಳಿಗೂ ವಿಷ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ್ದ ತಾಯಿ, ಇಬ್ಬರು ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಿಸದೆ ಸಿಂಧು ಎಂಬ ಹೆಸರಿನ 6 ವರ್ಷದ ಬಾಲಕಿ ಮೃತಪಟ್ಟಿದೆ. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ತಾಯಿ ಶೀಲ ಹಾಗೂ ಮಗು ಯಶವಂತ್ ಚಿಕಿತ್ಸೆ ಮುಂದುವರೆದಿದೆ. ಪ್ರತಿದಿನ ಕುಡಿದು ಬಂದು ಪತ್ನಿ ಶೀಲ ಜೊತೆಗೆ ಪತಿ ಜಗಳವಾಡುತ್ತಿದ್ದ. ಇದರಿಂದ ಬೇಸತ್ತು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.