ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ (Jain Muni) ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಆರೋಪಿಗಳಾದ ನಾರಾಯಣ ಮಾಳಿ, ಹಸನ್ ದಲಾಯತ್ರನ್ನು ಪೊಲೀಸರು ಜುಲೈ 17ರವರೆಗೆ ಕಸ್ಟಡಿಗೆ ಪಡೆದಿದ್ದಾರೆ. ಪೊಲೀಸರು ಇಬ್ಬರೂ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಎ1 ಆರೋಪಿ ನಾರಾಯಣ ಮಾಳಿ “ನಂದು ತಪ್ಪಾಯ್ತು ನೀವೆ ನನ್ನ ಗುಂಡು ಹಾರಿಸಿ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ ಮಾಡಿಕೊಳ್ಳುವೆ” ಹೇಳಿದ್ದಾನೆ.
ಅಲ್ಲದೇ ನಾರಾಯಣ ಮಾಳಿ ಜೈನಮುನಿಗಳ ಪರ್ಸನಲ್ ಡೈರಿ ಸುಟ್ಟು ಹಾಕಿದ್ದಾಗಿ ಹೇಳಿದ್ದು, ಆದರೆ ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಇನ್ನು ನಾರಾಯಣ ಮಾಳಿ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದ್ದು, ಭದ್ರತೆ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
ಭದ್ರತೆ ನಡುವೆಯೂ ಮಾನವೀಯತೆ ಮೆರೆದ ಪೊಲೀಸರು
ಕೆಎಸ್‌ಆರ್‌ಪಿ ಎರಡನೇ ಬಟಾಲಿಯನ್‌ನ 20ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಆರೋಪಿ ನಾರಾಯಣ ಮಾಳಿ ಕುಟುಂಬಸ್ಥರು ಬೇರೆಡೆ ಶಿಫ್ಟ್ ಮಾಡಲಾಗಿದೆ. ಈ ಹಿನ್ನೆಲೆ ಆರೋಪಿ ನಾರಾಯಣ ಮಾಳಿ ಮನೆಯಲ್ಲಿವೆ 30ಕ್ಕೂ ಹೆಚ್ಚು ಜಾನುವಾರುಗೆ ಪೊಲೀಸರೇ ಆರೈಕೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಹೊಲದಲ್ಲಿನ ಮೇವು ಕತ್ತರಿಸಿ ಎರಡು ಆಕಳು, ಎರಡು ಎಮ್ಮೆ, 20ಕ್ಕೂ ಹೆಚ್ಚು ಮೇಕೆಗಳಿಗೆ ಹಾಕುತ್ತಿದ್ದಾರೆ.
ನಾವು ಸಹ ರೈತನ ಮಕ್ಕಳು ಮಾನವೀಯತೆ ದೃಷ್ಟಿಯಿಂದ ಜಾನುವಾರುಗೆ ಮೇವು ಹಾಕುತ್ತಿದ್ದೇವೆ ಎಂದು ಪೊಲೀಸರು ಹೇಳಿದರು. ಪೊಲೀಸರ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.