ವಂದೇ ಭಾರತ್ ಸೇರಿದಂತೆ ವಿವಿಧ ರೈಲ್ವೆ ಟಿಕೆಟ್ ದರ ಶೇ. 25ರವರೆಗೂ ಕಡಿತಗೊಳಿಸಿದ ಭಾರತೀಯ ರೈಲ್ವೆ

ಬೆಂಗಳೂರು: ಭಾರತೀಯ ರೈಲ್ವೆ ತನ್ನ ಕೆಲ ರೈಲುಪ್ರಯಾಣ ದರಗಳನ್ನು  ಗಣನೀಯವಾಗಿ ಇಳಿಕೆ ಮಾಡಿದೆ. ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳಲ್ಲಿ ಪ್ರಯಾಣ ದರಗಳನ್ನು ಕಡಿಮೆಗೊಳಿಸಿದೆ. ಅನುಭೂತಿ ಮತ್ತು ವಿಸ್ತಾಡೋಮ್ ಕೋಚ್​ಗಳಲ್ಲಿ ಶೇ. 25ರವರೆಗೂ ಟಿಕೆಟ್ ಬೆಲೆ ಇಳಿಸಲಾಗಿದೆ. ಜನರ ಟಿಕೆಟ್​ಗಳಿಗೆ ಇರುವ ಬೇಡಿಕೆಗೆ ಅನುಸಾರವಾಗಿ ಟಿಕೆಟ್ ಬೆಲೆ ಇಳಿಕೆ ಪ್ರಮಾಣ ಇರಲಿದೆ ಎದು ರೈಲ್ವೆ ಬೋರ್ಡ್ ಸ್ಪಷ್ಟಪಡಿಸಿದೆ.

‘ಮೂಲ ದರದ ಶೇ. 25ರವರೆಗೂ ಡಿಸ್ಕೌಂಟ್ ಇರುತ್ತದೆ. ರಿಸರ್ವೇಶನ್ ಶುಲ್ಕ, ಸೂಪರ್ ಫಾಸ್ಟ್ ಸರ್​ಚಾರ್ಜ್, ಜಿಎಸ್​ಟಿ ಇತ್ಯಾದಿ ದರ ಪ್ರತ್ಯೇಕವಾಗಿರುತ್ತದೆ. ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಡಿಸ್ಕೌಂಟ್ ನೀಡಲಾಗುತ್ತದೆ’ ಎಂದು ಮಂಡಳಿ ಪ್ರಕಟಣೆಯಲ್ಲಿ ಹೇಳಲಾಗಿದೆ.

ಎಸಿ ಸೀಟುಗಳಿಗೆ ದರ ರಿಯಾಯಿತಿ ಯೋಜನೆಯನ್ನು ನಿಗದಿ ಮಾಡುವ ಅಧಿಕಾರವನ್ನು ವಿವಿಧ ರೈಲ್ವೆ ವಲಯಗಳ ಚೀಫ್ ಕಮರ್ಷಿಯಲ್ ಮ್ಯಾನೇಜರುಗಳಿಗೆ ವಹಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ಕೆಲ ರೈಲು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿರುವುದು ತಿಳಿದುಬಂದಿದೆ. ಅದರಲ್ಲೂ ಎಸಿ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದು, ಅಲ್ಲಿಗೆ ಜನರನ್ನು ಸೆಳೆಯಲು ರೈಲ್ವೆ ಇಲಾಖೆ ರಿಯಾಯಿತಿ ದರದ ಅಸ್ತ್ರ ಬಳಸುತ್ತಿದೆ. ‘ಕಳೆದ 30 ದಿನದಲ್ಲಿ ಶೇ. 50ಕ್ಕಿಂತಲೂ ಕಡಿಮೆ ಭರ್ತಿಯಾಗಿರುವ ದರ್ಜೆಗಳಿಗೆ ರಿಯಾಯಿತಿ ಒದಗಿಸಲು ಪರಿಗಣಿಸಲಾಗುತ್ತದೆ’ ಎಂದು ರೈಲು ಬೋರ್ಡ್ ತಿಳಿಸಿದೆ.

‘ತತ್​ಕ್ಷಣದಿಂದಲೇ ಈ ರಿಯಾಯಿತಿ ದರಗಳು ಅನ್ವಯ ಆಗುತ್ತವೆ. ಈಗಾಗಲೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಇದು ಅನ್ವಯ ಆಗುವುದಿಲ್ಲ’ ಎಂದು ಬೋರ್ಡ್ ಸ್ಪಷ್ಟಪಡಿಸಿದೆ. ಹಾಗೆಯೇ, ರಜೆ ಅಥವಾ ಹಬ್ಬದ ಸಂದರ್ಭಗಳಲ್ಲಿ ಬಿಡಲಾಗುವ ವಿಶೇಷ ರೈಲುಗಳ ಪ್ರಯಾಣಕ್ಕೂ ಈ ರಿಯಾಯಿತಿ ಸಿಗುವುದಿಲ್ಲ ಎಂದು ಹೇಳಲಾಗಿದೆ.