ಮಂಗಳೂರು: ಮಂಗಳೂರಿನಲ್ಲಿ ಮಳೆ ಅಬ್ಬರ ನಿಂತರೂ ಕಡಲ್ಕೊರೆತ ನಿಂತಿಲ್ಲ. ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು, ಅಲೆಗಳ ಅಬ್ಬರಕ್ಕೆ ಸಾರ್ವಜನಿಕ ಆಟದ ಆಟದ ಮೈದಾನದ ಭೂ ಭಾಗ ಸಮುದ್ರ ಪಾಲಾಗಿದೆ. ಮೈದಾನದ ಸುತ್ತ ಕಲ್ಲುಗಳನ್ನ ಹಾಕಲಾಗಿದ್ದರೂ ಅಲೆಗಳು ಕಲ್ಲುಗಳನ್ನ ದಾಟಿ ಮೈದಾನದ ಭಾಗಕ್ಕೆ ಬಡಿಯುತ್ತಿವೆ. ಅಲ್ಲದೇ ತಾತ್ಕಾಲಿಕವಾಗಿ ಅಳವಡಿಸಿದ್ದ ವೈಟ್ ಸ್ಯಾಂಡ್ ಬ್ಯಾಗ್ ಸಮುದ್ರಪಾಲಾಗಿದೆ.
ತಾತ್ಕಾಲಿಕ ಕಾಮಗಾರಿ ಆರಂಭ
ಮಂಗಳೂರಿನ ಬೀಚ್ಗಳಲ್ಲಿ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿ ಆರಂಭವಾಗಿದೆ. ಬೈಕಂಪಾಡಿ, ಮೀನಕಳಿಯ, ಪಣಂಬೂರು ಬೀಚ್ನಲ್ಲಿ ಅಲೆಗಳ ಅಬ್ಬರ ತಡೆಯಲು ಮರಳು ಚೀಲಗಳ ಅಳವಡಿಸಲಾಗುತ್ತಿದೆ. ಹಿಟಾಚಿ ಮೂಲಕ ದೊಡ್ಡ ಗಾತ್ರದ ಕಪ್ಪು ಬ್ಯಾಗ್ಗಳಿಗೆ ಮರಳು ತುಂಬಿಸಿ ಜೋಡಿಸಲಾಗುತ್ತಿದೆ.
ಇನ್ನು ಮಳೆ ಹೆಚ್ಚಾದರೆ ಅಲೆಗಳ ಅಬ್ಬರ ಮತ್ತಷ್ಟು ಜೋರಾಗಲಿದ್ದು, ಮೀನಕಳಿಯ ಭಾಗದ ಸುಮಾರು 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ. ಅಪಾಯದಲ್ಲಿರುವ ಮನೆಗಳ ತುರ್ತು ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಸಮುದ್ರದ ಅಲೆಗಳ ಅಬ್ಬರ ಏರಿಳಿತ ಗಮನಿಸಿ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ.