ಹೊಸಪೇಟೆ: ಈ ಬಾರಿ ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದು, ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ (Hampi) ಇಂದಿನಿಂದ 8 ದಿನ (ಜು.09 ರಿಂದ ಜು.16) ರವರೆಗೆ ನಡೆಯಲಿದೆ. ಈ ಮೂಲಕ ವಿಜಯನಗರ (Vijayanagar) ವಾಸ್ತುಶಿಲ್ಪ ಶೈಲಿ, ವಿಜಯನಗರ ಸಾಮ್ರಾಜ್ಯದ ಹಿರಿಮೆ-ಗರಿಮೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ದೇಷ್ಟಿಯಿಂದ ಹಂಪಿಯಲ್ಲಿ ಜಿ.20 ಶೃಂಗಸಭೆ ಆಯೋಜಿಸಲಾಗಿದೆ.
ಇನ್ನು ಇಂದಿನಿಂದ ಜು.13ರವರೆಗೆ ಜಿ20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯ ತಂಡದ ಸಭೆ ನಡೆಯಲಿದೆ. ಈ ತಂಡ ಭಾರತದ ಸಂಸ್ಕೃತಿ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಿದೆ. ಜೊತೆಗೆ ಸದಸ್ಯ ರಾಷ್ಟ್ರಗಳ ಐತಿಹಾಸಿಕ ಪಾರಂಪರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಬಗ್ಗೆ ಜಿ-20 ರಾಷ್ಟಗಳು ಸುದೀರ್ಘವಾಗಿ ಚರ್ಚೆ ನಡೆಸಲಿವೆ. ಈ ಸಭೆಯಲ್ಲಿ ದೇಶ-ವಿದೇಶದ 252 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಜಿ20 ಶೆರ್ಪಾ ಸಭೆ
ಜಿ20 ಶೆರ್ಪಾ ಸಭೆ ಜು.13ರಿಂದ 16ರವರೆಗೆ ನಡೆಯಲಿದೆ. ಜಿ20 ರಾಷ್ಟ್ರಗಳ ಪ್ರಧಾನಿಗಳ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಶೆರ್ಪಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಿ20 ರಾಷ್ಟ್ರಗಳ ಸಭೆಗಳಲ್ಲಿ ಇದೊಂದು ವಿಶೇಷ ಸಭೆಯಾಗಿದೆ. ಸಭೆಯಲ್ಲಿ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು, 4 ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಒಟ್ಟು 52 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಭಯ ಸಭೆಗಳಲ್ಲಿ 200ಕ್ಕೂ ಅಧಿಕ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ.