ಬೆಂಗಳೂರು (ಜು.08): ಗ್ಯಾರಂಟಿ ಯೋಜನೆ ಜಾರಿಯ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿ ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದ್ದಾರೆ. ಬಜೆಟ್ ಕುರಿತು ಹೇಳಿಕೆ ನೀಡಿರುವ ಸುಧಾಕರ್, ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್‌ನಲ್ಲಿ ಆರ್ಥಿಕ ಶಿಸ್ತಿಗೆ ತಿಲಾಂಜಲಿ ಹಾಡಿದೆ. ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯಲು ಸಿದ್ದರಾಮಯ್ಯ ದಿಟ್ಟಹೆಜ್ಜೆ ಇರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆಯವ್ಯಯ ಭಾಷಣದಲ್ಲಿ ಬರೀ ರಾಜಕೀಯ ಇದ್ದು, ಕಾಂಗ್ರೆಸ್ ಇನ್ನೂ ಚುನಾವಣಾ ಗುಂಗಿನಲ್ಲೇ ಇದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿರುವುದು ಕೀಳು ರಾಜಕೀಯ. ಇದು ರಿವರ್ಸ್ ಸರ್ಕಾರವಾಗಿದ್ದು, ರಾಜ್ಯದ ಅಭಿವೃದ್ಧಿಯೂ ರಿವರ್ಸ್ ಗೇರ್‌ನಲ್ಲಿ ಹಿಂದಕ್ಕೆ ಹೋಗಲಿದೆ ಎಂದು ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್‌ನಲ್ಲಿ ಬಯಲು ಸೀಮೆಯ ಜಿಲ್ಲೆಗಳ ವಿಚಾರದಲ್ಲಿ ತೀವ್ರ ಅಸಡ್ಡೆ ಹೊಂದಿದ್ದು, ನನಗೂ ಸೇರಿ ಈ ಭಾಗದ ಜನರಿಗೆ ಬಹಳ ನಿರಾಸೆಯಾಗಿದೆ. ಬಯಲುಸೀಮೆಯ ಯಾವುದೇ ಅಭಿವೃದ್ಧಿಯ ಗ್ಯಾರಂಟಿಯನ್ನು ಸರ್ಕಾರ ನೀಡಿಲ್ಲ. ಜನರಿಗೆ ಕೊಟ್ಟಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಅಸಹಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ಹಾಗೂ ಕೋಲಾರದ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ಜನ ಕಾಯುತ್ತಿದ್ದಾರೆ. ಈ ಯೋಜನೆಯ ಭೂ ಸ್ವಾಧೀನದ ಬಗ್ಗೆ ಹೇಳಿದ್ದಾರೆಯೇ ಹೊರತು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದ್ದರಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಯೋಜನೆ ಎರಡು ವರ್ಷಗಳಲ್ಲಿ ಅಲ್ಲ, ಐದು ವರ್ಷಗಳಲ್ಲೂ ಜಾರಿಯಾಗುವುದು ಅನುಮಾನ ಎಂದರು.
ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಹಾಗೂ ಹೂ ಬೆಳೆಗಾರರ ಅಭ್ಯುದಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ವಿಶ್ವದರ್ಜೆಯ ಹೂ ಮಾರುಕಟ್ಟೆನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ಘೋಷಣೆ ಮಾಡಿ .100 ಕೋಟಿ ಮೀಸಲಿಟ್ಟಿತ್ತು. ಇದರ ಜಾರಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ ಯೋಜನೆಯಡಿ ತೃತೀಯ ಹಂತದ ಶುದ್ಧೀಕರಣ ಕೈಗೊಳಲು ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.