ಮಣಿಪುರದಲ್ಲಿ ಶಾಲೆ ಎದುರು ಮಹಿಳೆಗೆ ಗುಂಡಿಕ್ಕಿ ಹತ್ಯೆ

ಎರಡು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಇಂಫಾಲ್​ ಪಶ್ಚಿಮ ಜಿಲ್ಲೆಯ ಶಾಲೆಯೊಂದರ ಎದುರು ದುಷ್ಕರ್ಮಿಗಳು ಮಹಿಳೆಯನ್ನು  ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಒಂದು ದಿನದ ಹಿಂದೆ ಶಾಲೆಗಳು ಪುನರಾರಂಭಗೊಂಡಗೊಂಡಿದ್ದು, ಈ ಘಟನೆಯು ಆ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಪಾವೊ ಮತ್ತು ಅವಾಂಗ್ ಸೆಕ್ಮೈ ಪ್ರದೇಶದಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಭದ್ರತಾ ಪಡೆಗಳು ಘರ್ಷಣೆಗೆ ಅಡ್ಡಿಪಡಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರತ್ಯೇಕ ಘಟನೆಯಲ್ಲಿ, ಪೊಲೀಸ್ ಶಸ್ತ್ರಾಗಾರದಿಂದ ಗಲಭೆಕೋರರು ಬಂದೂಕುಗಳನ್ನು ಲೂಟಿ ಮಾಡುವುದನ್ನು ತಡೆಯುವಲ್ಲಿ ಯಶಸ್ವಿಯಾದ ಪ್ರಯತ್ನಗಳ ನಂತರ, ತೌಬಲ್ ಜಿಲ್ಲೆಯಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ (IRB) ಸಿಬ್ಬಂದಿಯ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು.

ಘರ್ಷಣೆಯಲ್ಲಿ ಹೆಚ್ಚುವರಿ 10 ಜನರು ಗಾಯಗೊಂಡಿದ್ದಾರೆ, 6 ಮಂದಿ ಸ್ಥಿತಿ ಗಂಭೀರವಾಗಿದ್ದು, ಇಂಫಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮೊದಲು ಮಣಿಪುರ ಸರ್ಕಾರವು ಜುಲೈ 10ರವರೆಗೂ ರಾಜ್ಯಾದ್ಯಂತ ಇಂಟರ್​ನೆಟ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಆ ಅವಧಿಯನ್ನು 5 ದಿನಗಳ ಕಾಲ ವಿಸ್ತರಿಸಿದೆ.

ಮೇ 3ರಂದು ಮೊದಲು ಇಂಟರ್​ನೆಟ್ ಸ್ಥಗಿತಗೊಳಿಸಲಾಗಿತ್ತು. ಸಂಘರ್ಷದಲ್ಲಿ ಇಲ್ಲಿಯವರೆಗೂ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.