ಬೆಂಗಳೂರು: ಬಸವನಗುಡಿಯಲ್ಲಿರುವ ಬಿಎಂಎಸ್ ಈವ್ನಿಂಗ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಚ್ಚುವುದರೊಂದಿಗೆ ಬೆಂಗಳೂರಿನ ಸಂಜೆ ಇಂಜಿನಿಯರಿಂಗ್ ಕಾಲೇಜುಗಳ ಯುಗ ಅಂತ್ಯಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜು ನಡೆಸಲು ಅನುಮತಿ ನಿರಾಕರಿಸಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಆದೇಶ ಹೊರಡಿಸಿದ ಹಿನ್ನೆಲೆ ಬೆಂಗಳೂರಿನ ಏಕೈಕ ಸಂಜೆ ಇಂಜಿನಿಯರಿಂಗ್ ಕಾಲೇಜು ಮುಚ್ಚುವ ಹಂತಕ್ಕೆ ತಲುಪಿದೆ.
ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎಸ್ ಮುರಳೀಧರ್ ಮಾತನಾಡಿ, ಸಂಜೆ ಇಂಜಿನಿಯರಿಂಗ್ ಕಾಲೇಜು ಮುಂದುವರಿಕೆಗೆ ಅನುಮತಿ ನೀಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಎಐಸಿಟಿಇ ಆದೇಶ ಆಧರಿಸಿ ಸರ್ಕಾರ ಅನುಮತಿ ನಿರಾಕರಿಸಿದೆ. ಹೀಗಾಗಿ ಈ ವರ್ಷದಿಂದ ಸಂಜೆ ಇಂಜಿನಿಯರಿಂಗ್ ಕಾಲೇಜನ್ನು ಶಾಶ್ವತವಾಗಿ ಮುಚ್ಚಿದ್ದೇವೆ ಎಂದರು.
1970 ರ ದಶಕದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜುಗಳ ಪರಿಕಲ್ಪನೆಯನ್ನು ಕಾರ್ಮಿಕ ವರ್ಗಕ್ಕೆ ಉನ್ನತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪರಿಚಯಿಸಲಾಯಿತು. ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ) ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಉದ್ಯೋಗಕ್ಕೆ ಸೇರಿದ ಬಹಳಷ್ಟು ಡಿಪ್ಲೊಮಾ ಪದವೀಧರ ವಿದ್ಯಾರ್ಥಿಗಳು ತಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯಲು ಉನ್ನತ ಶಿಕ್ಷಣವನ್ನು ಈ ಈವ್ನಿಂಗ್ ಕಾಲೇಜ್ಗಳಲ್ಲಿ ಪಡೆದಿದ್ದಾರೆ. ನಾವು ಸಹ ಸಂಜೆ ಕಾಲೇಜುಗಳ ಪರವಾಗಿದ್ದೇವೆ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಆದರೆ AICTE ಆದೇಶವನ್ನು ಅನುಸರಿಸಬೇಕಾಗಿದೆ ಎಂದು ಮುರಳೀಧರ್ ತಿಳಿಸಿದ್ದಾರೆ.