ಮಂಗಳೂರು: ಕೋಟೆ ನಾಡು ಚಿತ್ರದುರ್ಗದ ಮುರುಘಾಶ್ರೀಗಳ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಇದೀಗ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಇಳಿದಿದೆ. ರಾಜ್ಯಾದ್ಯಂತ ಸೌಜನ್ಯ ಪರವಾಗಿ ನ್ಯಾಯದ ಹೋರಾಟ ನಡೆಸಲು ಒಡನಾಡಿ ಸಂಸ್ಥೆ ಮುಂದಾಗಿದೆ. ಈ ಸಂಬಂಧ ನಿನ್ನೆ(ಜುಲೈ 03) ಒಡನಾಡಿಯ ಮುಖಂಡರು ಸೌಜನ್ಯ ಪರ ಹೋರಾಟಗಾರರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯಕೊಡಿಸಲು ಒಡನಾಡಿ ಸಂಸ್ಥೆ ಹೋರಾಟಕ್ಕೆ ಇಳಿದಿದ್ದು ಭಾರೀ ಸಂಚಲನ ಮೂಡಿಸಿದೆ. ನಿನ್ನೆ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾನ್ಲಿ, ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆ. ಅತ್ಯಾಚಾರ ಮಾಡಿದ ಪಾಪಿಗಳನ್ನ ಇನ್ನೂ ನ್ಯಾಯದ ಕಟ ಕಟೆಗೆ ತರಲಾಗಿಲ್ಲ. ದೇಶದ ಕಾನೂನಿಗೆ ಇದು ಸಾಧ್ಯವಾಗಿಲ್ಲ ಎಂಬುವುದು ನಗೆ ಪಾಟಿಲಿನ ಸಂಗತಿ. ಸಿಬಿಐ ಘನತೆಯನ್ನ ಉಳ್ಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರುತನಿಖೆಯಾಗಬೇಕು. ನಾವು ಈ ಹೋರಾಟದಲ್ಲಿ ಕೈ ಜೋಡಿಸುತ್ತಿದ್ದೇವೆ ಎಂದರು.
ಯಾರು ಸೌಜನ್ಯಳನ್ನ ಅತ್ಯಾಚಾರ ಮಾಡಿದ್ರು ಎಂಬುವುದೇ ನಮ್ಮ ಹುಡುಕಾಟ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದರ ಬಗ್ಗೆ ಹೆಚ್ಚು ಮಾತನಾಡಬೇಕು. ಸಾಮಾಜಿಕ ಜವಾಬ್ದಾರಿ ಅನುಶಾಸನ ಬದ್ಧವಾದ ಹೊಣೆಗಾರಿಕೆ ಹೊತ್ತವರು. ತಮ್ಮ ಮನೆ ಬಾಗಿಲಲ್ಲಿರುವಂತಹ ತಮ್ಮ ಮನೆಯ ಮಗುವಿನ ಮೇಲಾಗಿರುವ ಅತ್ಯಾಚಾರ. ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯವಾಗಿದೆ. ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನೋದು ಹೆಗ್ಗಡೆ ಅವರ ಬಾಯಿಂದ ಬರಲಿ. ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾಗುತ್ತೀವಿ. ಸೌಜನ್ಯ ಹೋರಾಟ ಧರ್ಮದ ಕಾರ್ಯ. ಈ ಮಗುವಿಗೆ ನ್ಯಾಯವನ್ನ ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಸಂತೋಷ್ ರಾವ್ ಆರೋಪಿಯಲ್ಲ ಎಂದು ಸಾಬೀತಾದ ಹಿನ್ನಲೆ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಮತ್ತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಲಿದೆ.