ಯಲ್ಲಾಪುರ:ಉಮ್ಮಚಗಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರೇರಣಾ ಟ್ರಸ್ಟ್ ವತಿಯಿಂದ ‘ವೇದ-ನಾದ-ಯೋಗ’ ಎಂಬ ವಿಶಿಷ್ಟ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರೇರಣಾ ಟ್ರಸ್ಟ್ ವತಿಯಿಂದ ‘ವೇದ-ನಾದ-ಯೋಗ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಉಮ್ಮಚಗಿ ವಿದ್ಯಾ ಗಣಪತಿ ದೇವಸ್ಥಾನದ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಜನಪ್ರಿಯ ವೈದ್ಯ ಡಾ.ಎಂ.ಎಸ್.ಭಟ್ಟ ಮಾರಿಗೋಳಿ, ಶ್ರೀಮಾತಾ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಿದುಷಿ ಶರಾವತಿ ಗಜಾನನ ಭಟ್ಟ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಚೈತ್ರಾ ರಮೇಶ ನಾಯ್ಕ ಅವರನ್ನು ಗೌರವಿಸಲಾಯಿತು.
ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ದೃಷ್ಟಿಯಿಂದ ಯೋಗ, ವೇದ ಹಾಗೂ ಸಂಗೀತವನ್ನು ಒಂದೆಡೆ ಜೋಡಿಸುವ ವಿಶಿಷ್ಟ ಪ್ರಯತ್ನದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಟ್ರಸ್ಟ್ ನ ಮುಖ್ಯಸ್ಥರಾದ ವಾಣಿ ಭಟ್ಟ, ಯೋಗೇಶ ಭಟ್ಟ ಇದ್ದರು. ಮಹೇಶ ಭಟ್ಟ ಹಾಗೂ ಸುಜಾತಾ ಹೆಗಡೆ ನಿರ್ವಹಿಸಿದರು.
ವೇದ-ನಾದ-ಯೋಗಗಳು ನಮ್ಮ ಆರೋಗ್ಯಕ್ಕೆ ಹೇಗೆ ಪೂರಕ ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸಲಾಯಿತು. ವೇದದ ಬಗೆಗೆ ಶ್ರೀಮಾತಾ ಸಂಸ್ಕೃತ ಕಾಲೇಜಿನ ಅಧ್ಯಾಪಕರಾದ ಡಾ.ಕೆ.ಸಿ.ನಾಗೇಶ ಭಟ್ಟ, ಡಾ.ಮಹೇಶ ಭಟ್ಟ ಇಡಗುಂದಿ, ಯೋಗದ ಬಗೆಗೆ ಯೋಗಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಹಾಗೂ ಸಂಗೀತದ ಕುರಿತು ಗಾಯಕಿ ಸುಷ್ಮಾ ಹೆಗಡೆ ಇಸಳೂರು ವಿವರಿಸಿದರು.