ನವದೆಹಲಿ: 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಆರ್ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ದೆಹಲಿ ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮಾ, ನ್ಯಾ| ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ಉಚ್ಚ ನ್ಯಾಯಪೀಠ ಈ ತೀರ್ಪು ನೀಡಿದೆ. ರಜನೀಶ್ ಭಾಸ್ಕರ್ ಗುಪ್ತಾ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿ ಮೇ 30ರಂದು ತೀರ್ಪು ಕಾಯ್ದಿರಿಸಿತ್ತು.
2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಆರ್ಬಿಐ ತೆಗೆದುಕೊಂಡಿದ್ದು ತಪ್ಪು. 1934ರ ಆರ್ಬಿಐ ಕಾಯ್ದೆಯ ಸೆಕ್ಷನ್ 24(2) ಕಾನೂನು ಪ್ರಕಾರ ಆರ್ಬಿಐಗೆ ಆ ಅಧಿಕಾರ ಇಲ್ಲ. ನೋಟುಗಳನ್ನು ಹಿಂಪಡೆಯುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಿತ್ತು. ಹೀಗಾಗಿ, ನೋಟು ಹಿಂಪಡೆಯುವ ಕ್ರಮವನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರ ರಜನೀಶ್ ಭಾಸ್ಕರ್ ಗುಪ್ತಾ ವಾದಿಸಿದ್ದರು.
ಆದರೆ, ಎರಡು ಸಾವಿರ ರೂ ನೋಟುಗಳನ್ನು ತಾನು ನಿಷೇಧಿಸಿಲ್ಲ, ಕೇವಲ ಚಲಾವಣೆಯಿಂದ ಮಾತ್ರ ಹಿಂಪಡೆದಿದ್ದೇವೆ. ಇದು ಕರೆನ್ಸಿ ನಿರ್ವಹಣೆ ಮತ್ತು ಆರ್ಥಿಕ ನೀತಿಯ ಒಂದು ಭಾಗವಾಗಿ ತೆಗೆದುಕೊಳ್ಳಲಾದ ಕ್ರಮವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿವಾದಿಸಿತ್ತು. ಅಂತಿಮವಾಗಿ, ದೆಹಲಿ ಹೈಕೋರ್ಟ್ ನ್ಯಾಯಪೀಠವು ಆರ್ಬಿಐ ವಾದ ಪುರಸ್ಕರಿಸಿ, ಪಿಐಎಲ್ ಅನ್ನು ವಜಾಗೊಳಿಸಲು ನಿರ್ಧರಿಸಿತ್ತು.
2,000 ರೂ ಮುಖಬೆಲೆಯ ನೋಟುಗಳನ್ನು ಆರ್ಬಿಐ ಚಲಾವಣೆಯಿಂದ ಹಿಂಪಡೆದುಕೊಂಡಾಗ, ಎಸ್ಬಿಐ ಈ ನೋಟುಗಳ ವಿನಿಮಯಕ್ಕೆ ಯಾವ ದಾಖಲೆಗಳನ್ನು ಕೊಡಬೇಕಿಲ್ಲ ಎಂದು ಅಧಿಸೂಚನೆ ನೀಡಿತ್ತು. ಇದು ಭ್ರಷ್ಟಾಚಾರ ವಿರೋಧಿ ಕಾನೂನುಗಳಿಗೆ ವಿರುದ್ಧವಾದ ಕ್ರಮವಾಗಿತ್ತು ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ದೆಹಲಿ ಹೈಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಆರ್ಬಿಐ ಮತ್ತು ಎಸ್ಬಿಐ ತೆಗೆದುಕೊಂಡ ಕ್ರಮ ನಾಗರಿಕರ ಅನುಕೂಲತೆಯ ಉದ್ದೇಶದಿಂದಾಗಿತ್ತು ಎಂದು ಹೇಳಿ ನ್ಯಾಯಾಲಯವು ಆ ಅರ್ಜಿಯನ್ನು ಜೂನ್ 29ರಂದು ವಜಾಗೊಳಿಸಿತ್ತು.