ಕೊರೊನಾ ಎಫೆಕ್ಟ್​.. 2ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ: ಶಾಕಿಂಗ್​ ರಿಪೋರ್ಟ್​ ಬಹಿರಂಗ

ಬೆಂಗಳೂರು: ಮಹಾಮಾರಿ  ಕೊರೊನಾ ಇಡೀ ವಿಶ್ವವನ್ನೇ ಹಿಂಡಿಹಿಪ್ಪೆ ಮಾಡಿತ್ತು. ಸಿಕ್ಕ ಸಿಕ್ಕವರನ್ನೇ ಬಲಿ ಪಡೆದಿತ್ತು. ಈಗ ಕೊರೊನಾ ಹೋಯ್ತು ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಕಣ್ಣಿಗೆ ಕಾಣದ ಹೆಮ್ಮಾರಿಯ ಆಟ ನಿಜಕ್ಕೂ ಭಯಬೀಳುವಂತಿದೆ. ಲಕ್ಷ ಲಕ್ಷ ಶಾಲಾ ಮಕ್ಕಳೇ ಅಪೌಷ್ಠಿಕತೆಯಿಂದ ಬಳಲುವಂತಾಗಿದೆ. ಹೌದು.. ರಾಜ್ಯದಲ್ಲಿ ಕೊರೊನಾ ತಗ್ಗಿದ್ರೂ ಅದರ ಪರಿಣಾಮ ನಿಜಕ್ಕೂ ಎಂಥವರೂ ಬೆಚ್ಚಿಬೀಳಿಸುವಂತಿದೆ. ರಾಜ್ಯದಲ್ಲಿ ಬರೊಬ್ಬರಿ 2 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಪುಟಾಣಿ ಮಕ್ಕಳ ಬದುಕಿನಲ್ಲಿ ಹೆಮ್ಮಾರಿ ಕೊರೊನಾ ಕತ್ತಲನ್ನೇ ಸೃಷ್ಟಿಸಿದೆ. ಅಪೌಷ್ಠಿಕತೆಯ ಬಗ್ಗೆ ಯಾರೋ ವರದಿ ಮಾಡಿದ್ದು ಅಲ್ಲ. ಪುಟಾಣಿ ಮಕ್ಕಳ ಅಪೌಷ್ಠಿಕತೆ ವರದಿ ನೀಡುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಶಾಕಿಂಗ್​ ರಿಪೋರ್ಟ್​ ಕೊಟ್ಟಿದೆ.

5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿರುವುದು ಪೋಷಕರಲ್ಲಿ ಭೀತಿ ಹುಟ್ಟಿಸಿದೆ. ಮಕ್ಕಳ್ಳಲ್ಲಿ ಹೆಚ್ಚಿದ ಅಪೌಷ್ಠಿಕತೆ ಪರಿಣಾಮ ಮಕ್ಕಳಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 8,711 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದ್ರೆ, 2,23,221 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಪೌಷ್ಠಿಕತೆಯ ಕಾರಣಕ್ಕೆ ಮಕ್ಕಳಲ್ಲಿ ಕಡಿಮೆ ತೂಕ, ರಕ್ತಹೀನತೆ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುತ್ತಿವೆ. ಸಾಕಷ್ಟು ಮಕ್ಕಳ ಸಾವಿಗೂ ಕಾರಣವಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.

ಒಟ್ಟಾರೆಯಾಗಿ ಕೊರೊನಾ ಎಫೆಕ್ಟ್​ನಿಂದ ಲಕ್ಷಾಂತರ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಸೃಷ್ಟಿಯಾಗಿರುವುದು ಆತಂಕ ಹುಟ್ಟಿಸಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ.