ಸಂಸತ್ ಮುಂಗಾರು ಅಧಿವೇಶನ ನೆಪವೊಡ್ಡಿ ಪ್ರತಿಪಕ್ಷಗಳ ಸಭೆ ಮತ್ತೆ ಮುಂದೂಡಿಕೆ

ಸಂಸತ್ ಮುಂಗಾರು ಅಧಿವೇಶನದ ನೆಪವೊಡ್ಡಿ ಪ್ರತಿಪಕ್ಷಗಳು ತಮ್ಮ ಸಭೆಯನ್ನು ಮತ್ತೆ ಮುಂದೂಡಿವೆ. ಎನ್‌ಸಿಪಿಯಲ್ಲಿ ಉದ್ಭವವಾಗಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಪಕ್ಷಗಳ ಒಗ್ಗಟ್ಟಿಗೂ ಬೆದರಿಕೆಗಳು ಎದುರಾಗಿವೆ. ಪಾಟ್ನಾ ನಂತರ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರತಿಪಕ್ಷಗಳ ಸಭೆಯನ್ನು ಸಂಸತ್ ಅಧಿವೇಶನದವರೆಗೆ ಮುಂದೂಡಲಾಗಿದೆ. ಈ ಒಗ್ಗಟ್ಟಿನ ಪ್ರಮುಖ ಮುಖವೆಂದು ಪರಿಗಣಿಸಲಾದ ಶರದ್ ಪವಾರ್ ಅವರ ಪಕ್ಷದ ಆಜ್ಞೆಯನ್ನು ಈಗ ಪ್ರಶ್ನಿಸಿರುವ ಕಾರಣ ಪ್ರತಿಪಕ್ಷಗಳ ಒಗ್ಗಟ್ಟಿಗೂ ದೊಡ್ಡ ಹೊಡೆತ ಬಿದ್ದಿದೆ.

ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಸುಮಾರು 15 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಭಾಗವಹಿಸಿದ್ದರು. ಇದಲ್ಲದೇ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಸಭೆಯಲ್ಲಿದ್ದರು.

ಪಾಟ್ನಾದ ಸಭೆಯ ನಂತರ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದರೂ ಕೂಡ, ಅನೇಕ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಬಿಜೆಪಿಯಂತೆಯೇ ವಿಭಿನ್ನ ಅಭಿಪ್ರಾಯ ಹೊಂದಿದ್ದವು. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವು ಯುಸಿಸಿಗೆ ತಾತ್ವಿಕ ಬೆಂಬಲ ನೀಡಿದ್ದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಕೂಡ ಅದೇ ನಿಲುವನ್ನು ಹೊಂದಿತ್ತು. ಇದಲ್ಲದೆ ಶರದ್ ಪವಾರ್ ಎನ್​ಸಿಪಿ ಕೂಡ ತಟಸ್ಥವಾಗಿತ್ತು.

ಅಜಿತ್ ಪವಾರ್ ಎನ್​ಸಿಪಿ ತೊರೆದು ಏಕನಾಥ್ ಶಿಂದೆ ಸರ್ಕಾರ ಸೇರಿ ಈಗ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್​ಸಿಪಿಯು ಕೂಡ ಶಿವಸೇನೆಯಂತೆ ಇಬ್ಭಾಗವಾಗಿದೆ.