4597 ದಿನಗಳ ನಂತರ ವಾಂಖೆಡೆಯಲ್ಲಿ ಭಾರತ- ಲಂಕಾ ಫೈಟ್..! ಮರುಕಳಿಸುತ್ತಾ ಇತಿಹಾಸ?

 ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿದ ಶ್ರೀಲಂಕಾ ತಂಡ ಅಂತಿಮವಾಗಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿದೆ. ಭಾನುವಾರ ಬುಲವಾಯೊದಲ್ಲಿ ನಡೆದ ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ವಿಶ್ವಕಪ್‌ಗೆ ಪ್ರವೇಶ ಪಡೆಯಲು ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡವು 2023 ರ ವಿಶ್ವಕಪ್‌ಗೆ ಪ್ರವೇಶ ಪಡೆಯಲ್ಲಿತ್ತು. ಹೀಗಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಏಕಪಕ್ಷೀಯ ಗೆಲುವು ಸಾಧಿಸಿದ ಲಂಕಾ ಪಡೆ ಇದೀಗ ವಿಶ್ವಕಪ್ ಆಡುವ 10 ತಂಡಗಳಲ್ಲಿ 9ನೇ ತಂಡವಾಗಿ ವಿಶ್ವ ಸಮರಕ್ಕೆ ಎಂಟ್ರಿಕೊಟ್ಟಿದೆ. ಇದರೊಂದಿಗೆ 4597 ದಿನಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಬರೋಬ್ಬರಿ 12 ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಅಂದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಧೋನಿ ನಾಯಕತ್ವದ ಟೀಂ ಇಂಡಿಯಾ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಶ್ರೀಲಂಕಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿರುವುದರೊಂದಿಗೆ ಭಾರತದ ಎದುರು ವಾಂಖೆಡೆ ಮೈದಾನದಲ್ಲಿ ಸೆಣಸಾಡಲು ಮುಂದಾಗಿದೆ.