ಫೋನ್​​​ ಪೇ ಮೂಲಕ 66 ಸಾವಿರ ರೂ. ಲಂಚ ಪಡೆದ ಗ್ರಾಮ ಲೆಕ್ಕಿಗನನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟ ಮಹಿಳೆ

ಮಂಡ್ಯ: ಕೆಲ ಸರ್ಕಾರಿ ಅಧಿಕಾರಿಗಳು ಯಾವ ಮಟ್ಟಿಗೆ ಇಳಿದಿದ್ದಾರೆ ಅಂದ್ರೆ ಹಣ ಕೊಡಲಿಲ್ಲ ಅಂದರೆ ಜನರ ಕೆಲಸಗಳನ್ನು ಮಾಡಿಕೊಡಲ್ಲ. ಏನೇ ಕೆಲಸ ಮಾಡಿಕೊಡಬೇಕಿದ್ದರೂ ಮೊದಲಿಗೆ ಅಷ್ಟು ಕೊಡಿ ಇಷ್ಟು ಕೊಡಿ ಎಂದು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಇನ್ನು ಕೆಲ ಅಧಿಕಾರಿಗಳು ಲಂಚ ತೆಗೆದುಕೊಂಡರೂ ಸಾರ್ವಜನಿಕರ ಕೆಲಸ ಮಾಡಿಕೊಡಲ್ಲ. ಅದರಂತೆ ದುಡ್ಡು ತೆಗೆದುಕೊಂಡು ಒಂದು ವರ್ಷವಾದರೂ ಕೆಲಸ ಮಾಡಿಕೊಡದಿದ್ದರಿಂದ ರೊಚ್ಚಿಗೆದ್ದ ಮಂಡ್ಯ ಜಿಲ್ಲೆಯ ಮಹಿಳೆ,  ಸಾಕ್ಷಿ ಸಮೇತ ಗ್ರಾಮ ಲೆಕ್ಕಿಗನ ಕರ್ಮಕಾಂಡ ಬಯಲು ಮಾಡಿದ್ದಾಳೆ.

ಗ್ರಾಮ ಲೆಕ್ಕಿಗನೊಬ್ಬ ಮಹಿಳೆಯಿಂದ  ಗೂಗಲ್​ ಪೇ ಮೂಲಕ ಬರೋಬ್ಬರಿ 66 ಸಾವಿರ ರೂ. ಲಂಚ ಪಡೆದುಕೊಂಡು ಸಿಕ್ಕಿಬಿದ್ದಿದ್ದಾನೆ. ಗೂಗಲ್​ ಪೇ ಮೂಲಕ 66 ಸಾವಿರ ರೂ ಲಂಚ ಪಡೆದಿದ್ದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರನನ್ನು ಮಹಿಳೆ ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದಾಳೆ.

ಜಂಟಿ ಖಾತೆ ಮಾಡಿಕೊಡಲು ಲಾಳನಕೆರೆ ಗ್ರಾಮದ ಮೀನಾಕ್ಷಿ ಎನ್ನುವ ಮಹಿಳೆ ಬಳಿ 66 ಸಾವಿರ ರೂ. ಲಂಚ ಪಡೆದಿದ್ದ. ಅದೂ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದ. 66 ಸಾವಿರ ರೂ. ಲಂಚದ ಹಣವನ್ನು 5 ಕಂತುಗಳಲ್ಲಿ ಪಡೆದುಕೊಂಡಿದ್ದ. ಲಂಚ ಕೊಟ್ಟರೂ ಜಂಟಿ ಖಾತೆ ಮಾಡಿಕೊಡಲು 1 ವರ್ಷದಿಂದ ಕಚೇರಿಗೆ ಅಲೆಸಿದ್ದಾನೆ. ದುಡ್ಡು ಕೊಟ್ಟರು ಕೆಲಸ ಮಾಡಿಕೊಡದಿದ್ದರಿಂದ ಆಕ್ರೋಶಗೊಂಡ ಮಹಿಳೆ, ನಾಗಮಂಗಲ ತಹಶೀಲ್ದಾರ್​, ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾಳೆ.

ಫೋನ್ ಪೇ ಮೂಲಕ ಲಂಚ ಪಡೆದಿರುವ ಬಗ್ಗೆ ಸಾಕ್ಷಿ ಸಮೇತವಾಗಿ ನಾಗಮಂಗಲ ತಹಶೀಲ್ದಾರ್​, ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೀಗ ಮಹಿಳೆಯ ದೂರಿನ ಮೇರೆಗೆ ಗ್ರಾಮ ಲೆಕ್ಕಿಗ ನಿಂಗಪ್ಪನಿಗೆ ನೋಟಿಸ್ ಜಾರಿ ಮಾಡಿಲಾಗಿದೆ. ಆದ್ರೆ, ಲೆಕ್ಕಿಗ ನಿಂಗಪ್ಪ ನೋಟಿಸ್​ಗೆ ಉತ್ತರಿಸದೆ ನಾಪತ್ತೆಯಾಗಿದ್ದಾನೆ.