ಚೆನ್ನೈ (ಜು.1): ತಂದೆ ಲೋನ್ ಕಟ್ಟದ ಕಾರಣಕ್ಕಾಗಿ ಲೋನ್ ರಿಕವರಿ ಏಜೆಂಟ್ ಆತನ 11 ವರ್ಷದ ಮಗಳನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ. ಫೈನಾನ್ಸ್ ಕಂಪನಿಯೊಂದರ 27 ವರ್ಷದ ಏಜೆಂಟ್, ಶುಕ್ರವಾರ 11 ವರ್ಷದ ಬಾಲಕಿಯನ್ನು ಆತ ಅಪಹರಣ ಮಾಡಿದ್ದ. ಬಾಲಕಿಯ ತಂದೆ ಕಳೆದ ಕೆಲವು ತಿಂಗಳುಗಳಿಂದ ಸಾಲದ ಕಂತುಗಳನ್ನು ಪಾವತಿ ಮಾಡಲು ವಿಫಲವಾಗಿದ್ದ ಕಾರಣಕ್ಕೆ ಆತನ ಮಗಳನ್ನು ಮನೆಯಿಂದ ಅಪಹರಿಸಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ದಿನಗೂಲಿಯಾಗಿ ಕೆಲಸ ಮಾಡುವ 32 ವರ್ಷದ ವನತು ರಾಜಾ ತಮಿಳುನಾಡಿನ ಕೀರನೂರಿನಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಉದ್ಯೋಗಾವಕಾಶಗಳ ಕೊರತೆಯಿಂದಾಗಿ ರಾಜಾ ಕೆಲವು ತಿಂಗಳುಗಳಿಂದ ಸಾಲ ಮರು ಪಾವತಿ ಮಾಡೋದು ಸಾಧ್ಯವಾಗಿರಲಿಲ್ಲ. ಫೈನಾನ್ಸ್ ಕಂಪನಿಯ ಏಜೆಂಟ್ ಆಗಿದ್ದ ವಿಘ್ನೇಶ್ ಅವರು ಬಾಕಿ ಹಣವನ್ನು ವಸೂಲಿ ಮಾಡಲು ತಿರುನೆಲ್ವೆಲ್ಲಿ ಜಿಲ್ಲೆಯ ಮರುತೂರ್ ಗ್ರಾಮದಲ್ಲಿರುವ ರಾಜಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಜಾ ಅವರ 11 ವರ್ಷದ ಮಗಳು ಮನೆಯಲ್ಲಿದ್ದಳು, ತಂದೆಯ ಬಗ್ಗೆ ಕೇಳಿದಾಗ ಅವರು ಇಲ್ಲ ಎಂದು ವಿಘ್ನೇಶ್‌ಗೆ ತಿಳಿಸಿದ್ದಳು.
ಈ ವೇಳೆ ವಿಘ್ನೇಶ್ ರಾಜಾ ಮಗಳನ್ನು ಅಪಹರಿಸಿ ಫೈನಾನ್ಸ್ ಕಂಪನಿಯ ಕಚೇರಿಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳು ಕಾಣೆಯಾಗಿರುವ ವಿಷಯ ತಿಳಿದ ರಾಜಾ ಕೂಡಲೇ ಕೀರನೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಗುವಿನ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು, ಹಣಕಾಸು ಕಂಪನಿಯ ಕಚೇರಿಗೆ ಬಂದಿದ್ದರು.