ಭುವನೇಶ್ವರ/ಬೆಂಗಳೂರು ವರದಿ: ಬಾಲಸೋರ್ ರೈಲು ಅಪಘಾತದ ನಂತರ ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನಿಲ್ ಕುಮಾರ್ ಮಿಶ್ರಾ ಅವರಿಗೆ ಆಗ್ನೇಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಳ್ಳಲು ಸೂಚಿಸಲಾಗಿದೆ. ಅರ್ಚನಾ ಅವರು 1985-ಬ್ಯಾಚ್ ಭಾರತೀಯ ರೈಲ್ವೆ ಸಂಚಾರ ಸೇವೆ ಅಧಿಕಾರಿ. ಜುಲೈ 30, 2021 ರಂದು ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಭಾರತೀಯ ರೈಲ್ವೇ ತನ್ನ ಅಧಿಕೃತ ಹೇಳಿಕೆಯಲ್ಲಿ, “ಬಾಲಾಸೋರ್ ರೈಲು ಅಪಘಾತದ ನಂತರ ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚಮಾ ಜೋಶಿ ಅವರು ತಮ್ಮ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಆಗ್ನೇಯ ರೈಲ್ವೆಯ ಸುದ್ದಿ ಪ್ರಧಾನ ವ್ಯವಸ್ಥಾಪಕರಾಗಲು ಅನಿಲ್ ಕುಮಾರ್ ಮಿಶ್ರಾ ಅವರನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ.” ಎಂದು ವರದಿ ಮಾಡಿದೆ.
ರೈಲ್ವೆ ಇಲಾಖೆ ಈ ಸಂಬಂಧ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ. ಇದರೊಂದಿಗೆ ದುರಂತದ ಬಳಿಕ ಒಟ್ಟು 6 ವಲಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದಂತಾಗಿದೆ. ಈಗ 6ನೇಯವರಾಗಿ ಆರ್ಚನಾ ಎತ್ತಂಗಡಿ ಆಗಿದ್ದಾರೆ.
ಸಿಗ್ನಲಿಂಗ್ ದೋಷದಿಂದಾಗಿ ಕೋರಮಂಡಲ ಎಕ್ಸ್‌ಪ್ರೆಸ್ ರೈಲು, ಮುಖ್ಯ ಮಾರ್ಗದಲ್ಲಿ ಸಾಗದೇ ಪಕ್ಕದ ಮಾರ್ಗದಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 3ನೇ ಮಾರ್ಗದ ಮೇಲೆ ಹೋಗಿ ಬಿದ್ದಿತ್ತು. ಆಗ ಆ ಮಾರ್ಗದಲ್ಲಿ ಬಂದ ಬೆಂಗಳೂರು-ಹೌರಾ ರೈಲು, ಕೋರಮಂಡಲದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಈ ಸಿಗ್ನಲಿಂಗ್ ದೋಷವು ಸಿಬ್ಬಂದಿ ನಿರ್ಲಕ್ಷ್ಯದಿಂದ ಆಗಿದ್ದು ಎಂಬ ಆರೋಪವಿದ್ದು, ಸಿಬಿಐ ತನಿಖೆ ನಡೆಯುತ್ತಿದೆ.