ಗಾಡಿ ತೊಳೆದು ಬರುವುದರೊಳಗೆ ಪತ್ನಿ, ಮಗಳು ಮಾಯ: ಬ್ರಕೀದ್​ ದಿನವೇ ಅಫ್ತರ್ ಹುಸೇನ್​ಗೆ ಶಾಕ್

ಬೆಂಗಳೂರು: ಇಂದು (ಜೂನ್ 29) ಪ್ರಪಂಚದಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಹೊಸ ಬಟ್ಟೆ ತೊಟ್ಟು, ಮನೆಯಲ್ಲಿ ಸಿಹಿ ಮಾಡಿ ಖುಷಿ ಖುಷಿಯಾಗಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದ ಅಫ್ತರ್ ಹುಸೇನ್​ಗೆ ಆಘಾತವಾಗಿದೆ. ಹೌದು…ಗಾಡಿ ತೊಳೆದು ಬರುವುದರೊಳಗೆ ಅಫ್ತರ್ ಹುಸೇನ್​ನ ಪತ್ನಿ ಹಾಗೂ ಮಗಳು ನಾಪತ್ತೆಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ನ ಹೆಬ್ಬಗೋಡಿ ಠಾಣಾ‌ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಈ ಘಟನೆ ನಡೆದಿದ್ದು, ಹಬ್ಬದ ಸಂಭ್ರಮದಲ್ಲಿದ್ದ  ಅಫ್ತರ್ ಹುಸೇನ್ ಕಂಗಾಲಾಗಿದ್ದಾನೆ.

ವಾಟರ್ ಟ್ಯಾಂಕರ್ ಓಡಿಸಿ ಜೀವನ‌ ಸಾಗಿಸುತ್ತಿರುವ ಅಫ್ತರ್, ನಾಪತ್ತೆಯಾದ ಪತ್ನಿ ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಒಂದೇ ಬಟ್ಟೆಯಲ್ಲಿ ಹೋಗಿದ್ದಾರೆ. ಅವರ ಬಳಿ ಹಣವೂ ಇಲ್ಲ, ಮೊಬೈಲ್ ಇಲ್ಲ. ಮಡದಿ ಮಕ್ಕಳಿಲ್ಲದೇ ಬಕ್ರಿದ್ ಹೇಗೆ ಆಚರಿಸಲಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಆದ್ರೆ, ನಾಪತ್ತೆಯಾದವರ ಬಳಿ ಮೊಬೈಲ್ ಇಲ್ಲದ ಕಾರಣ ಟ್ರ್ಯಾಕ್ ಮಾಡುವುದೇ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿದೆ.

ಅಸ್ಸಾಂ ಮೂಲದ ಅಫ್ತರ್ ಹುಸೇನ್ ಚಾಲಕನಾಗಿ ಕೆಲಸ ಮಾಡಿಕೊಂಡು ಪತ್ನಿ ಹಾಗೂ ಮಗಳ ಜೊತೆ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ವಾಸವಿದ್ದಾನೆ. ಆದ್ರೆ, ಏಕಾಏಕಿ ಪತ್ನಿ ಹಾಗೂ ಮಗಳು ನಾಪತ್ತೆಯಾಗಿದ್ದರಿಂದ ಅಫ್ತರ್ ಹುಸೇನ್​ಗೆ ದಿಕ್ಕುತೋಚದಂತಾಗಿದ್ದು, ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ.