ಟೈಟಾನಿಕ್ ಸಬ್‌ಮೆರಿನ್ ದುರಂತ: ಅವಶೇಷಗಳ ತೀರಕ್ಕೆ ಎಳೆದು ತಂದ ರಕ್ಷಣಾ ತಂಡ

ನ್ಯೂಫೌಂಡ್‌ಲ್ಯಾಂಡ್‌: ಟೈಟಾನಿಕ್ ಅವಶೇಷಗಳ ನೋಡಲು ಐವರು ಪ್ರವಾಸಿಗರನ್ನು ಹೊತ್ತೊಯ್ದು ಬಳಿಕ ನಾಪತ್ತೆಯಾದ ಸಬ್‌ ಮೆರಿನ್‌ನ ಅವಶೇಷಗಳು ರಕ್ಷಣಾ ತಂಡಕ್ಕೆ ಸಿಕ್ಕಿದ್ದು, ಅದನ್ನು ಸಮುದ್ರ ತೀರಕ್ಕೆ ಎಳೆದು ತರಲಾಗಿದೆ. ಅದರ ಮೊದಲ ಫೋಟೋಗಳನ್ನು ಅಸೋಸಿಯೇಟೆಡ್ ಪ್ರೆಸ್ ಬಿಡುಗಡೆ ಮಾಡಿದೆ. ಈ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಸಮುದ್ರದಾಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ದಿತ್ತು. ಆದರೆ ಅಟ್ಲಾಂಟಿಕಾದ ಸಮುದ್ರ ತೀರದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಈ ನೌಕೆ ಸಂಪರ್ಕ ಕಳೆದುಕೊಂಡಿತ್ತು. ಇದಾದ ಬಳಿಕ ಕೆನಡಾ, ಅಮೆರಿಕಾ, ಬ್ರಿಟನ್ ದೇಶಗಳ ರಕ್ಷಣಾ ತಂಡಗಳು ಈ ಐವರಿಗೆ ತೀವ್ರ ಶೋಧ ನಡೆಸಿದ್ದರು. ಆದರೂ ಅವರು ಪತ್ತೆಯಾಗಿರಲಿಲ್ಲ. ನಂತರದಲ್ಲಿ ಸಬ್‌ಮೆರಿನ್‌ನ ಅವಶೇಷ ಪತ್ತೆಯಾಗಿದ್ದು, ಅದನ್ನೀಗ ರಕ್ಷಣಾ ತಂಡ ಸಾಗರದಿಂದ ಸಮುದ್ರ ತೀರಕ್ಕೆ ತಂದಿಳಿಸಿದೆ. 

ಕಳೆದ ವಾರ ಐವರು ಪ್ರವಾಸಿಗರನ್ನು ಹೊತ್ತೊಯ್ದ ಈ ಪುಟ್ಟ ಸಬ್‌ಮೆರ್ಸಿಬಲ್‌ (ಸಬ್‌ಮೆರಿನ್) ನಾಪತ್ತೆಯಾದ ನಂತರ ಅವರ ಪತ್ತೆಗಾಗಿ ದೊಡ್ಡಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಈ ಪುಟ್ಟ ಜಲಾಂತರ್ಗಾಮಿಯಲ್ಲಿ ಬ್ರಿಟನ್‌ನ ಉದ್ಯಮಿ  ಸಾಹಸಿ ಹಮಿಶ್ ಹಾರ್ಡಿಂಗ್, ಟೈಟಾನಿಕ್ ತಜ್ಞ ಹಾಗೂ ಫ್ರಾನ್ಸ್‌ನ ಆಳ ಸಮುದ್ರ ಶೋಧಕ ಪೌಲ್-ಹೆನ್ರಿ ನರ್ಗೆಲೆಟ್, ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ಉದ್ಯಮಿ ಶಹಜಾದಾ ದಾವೂದ್, ದಾವೂದ್ ಪುತ್ರ ಸುಲೇಮಾನ್ ದಾವೂದ್ ಮತ್ತು ಓಷನ್‌ಗೇಟ್ ಸಿಇಒ ಸ್ಟಾಕ್‌ಟನ್ ರಶ್ ಈ ಪುಟ್ಟ  ಸಬ್‌ಮೆರಿನ್‌ನಲ್ಲಿದ್ದರು. 

ಓಷನ್‌ಗೇಟ್ ಈ ಪ್ರವಾಸವನ್ನು ಆಯೋಜಿಸಿತ್ತು. ಜೂನ್ 18ರ ಭಾನುವಾರ ಅಟ್ಲಾಂಟಿಕಾ ಸಮುದ್ರಕ್ಕೆ ಜಿಗಿದು ಪ್ರಯಾಣ ಆರಂಭಿಸಿದ ಈ ಕೆಲ ಗಂಟೆಗಳ ನಂತರ ಹಾಗೂ ಟೈಟಾನಿಕ್ ಅವಶೇಷಗಳನ್ನು ತಲುಪಲು ಇನ್ನೆರಡು ಗಂಟೆಗಳಿರುವಾಗ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಆದರೆ ಅದು ಮುಗಿದು ಹೋದ ನಂತರವೂ ಸಬ್‌ಮೆರಿನ್ ಪತ್ತೆಯಾಗಿರಲಿಲ್ಲ.

ಅಮೆರಿಕಾದ ಕೋಸ್ಟ್ ಗಾರ್ಡ್ ಮತ್ತು ಇತರ ಸಂಸ್ಥೆಗಳ ಅತ್ಯುತ್ತಮ ಹುಡುಕಾಟ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಜೂನ್ 22ರಂದು ಈ ಸಬ್‌ಮೆರಿನ್‌ನ  ಶೋಧದ ಪ್ರದೇಶದಲ್ಲಿ ಅದರ ಅವಶೇಷಗಳು ಕಂಡುಬಂದಿದ್ದವು. ಹೀಗಾಗಿ ಟೈಟಾನ್ ಹೆಸರಿನ ಈ  ನೌಕೆಯು ಸ್ಫೋಟಗೊಂಡಿದೆ ಹಾಗಾಗಿ ಹಡಗಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕೋಸ್ಟ್ ಗಾರ್ಡ್ ಘೋಷಣೆ ಮಾಡಿತ್ತು. ಸದ್ಯ ಈ ಟೈಟಾನ್ ಸಬ್‌ಮೆರಿನ್‌ನ ಅವಶೇಷಗಳನ್ನು ರಕ್ಷಣಾ ತಂಡ ಸಮುದ್ರದಿಂದ ಹೊರಗೆ ತೆಗೆದಿದ್ದು, ಅದರ ಫೋಟೋವನ್ನು ಬಿಡುಗಡೆಗೊಳಿಸಿದೆ. 

ಫೋಟೋಗಳಲ್ಲಿ ಟೈಟಾನ್ ಸಬ್‌ಮೆರಿನ್‌ನ ದೊಡ್ಡ ತುಂಡೊಂದನ್ನು ತೀರಕ್ಕೆ ತಂದಿಳಿಸಿರುವುದನ್ನು ನೋಡಬಹುದಾಗಿದೆ. ಸಬ್‌ಮೆರಿನ್‌ನ ಹುಡುಕಾಟದ ನಂತರ ಸಿಕ್ಕಿದ ಅದರ ಅವಶೇಷಗಳನ್ನು ಯುಎಸ್‌ನ ಕೋಸ್ಟ್ ಗಾರ್ಡ್ ಹಡಗು ಸೈಕಾಮೋರ್ ಮತ್ತು ಹೊರೈಸನ್ ಆರ್ಕ್ಟಿಕ್‌ನಿಂದ ಹೊರತೆಗೆದು  ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ನಲ್ಲಿರುವ ಕೆನಡಿಯನ್ ಕೋಸ್ಟ್ ಗಾರ್ಡ್ ಪಿಯರ್‌ನಲ್ಲಿ ಇಳಿಸಲಾಗಿದೆ. ಈ ಅವಶೇಷವೂ ಟೈಟಾನಿಕ್ ಅವಶೇಷ ಇರುವ ಸಮುದ್ರದಾಳದ ಸ್ಥಳದಿಂದ 1600 ಅಡಿ ದೂರದಲ್ಲಿ ಸಿಕ್ಕಿದೆ ಎಂದು ವರದಿ ಆಗಿದೆ. 

1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷವನ್ನು ನೋಡುವ ಸಲುವಾಗಿ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು.  ಟೈಟಾನಿಕ್  ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಜೂನ್‌18ರಂದು ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿತ್ತು.

ಟೈಟಾನಿಕ್‌ ಅವಶೇಷಗಳ ವೀಕ್ಷಣೆಯೂ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ ತೆರಳಲು ಪ್ರವಾಸ ಆಯೋಜಿಸಿದ ಓಷನ್‌ಗೇಟ್ ಸಂಸ್ಥೆ 8 ದಿನಗಳ ಈ ಪ್ರವಾಸಕ್ಕೆ, ಒಬ್ಬರಿಗೆ  250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿ ದರ ನಿಗದಿ ಮಾಡಿತ್ತು. ಜೂ.18ರಂದು ಸಬ್‌ಮರೀನ್‌ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು.