ಕೌಟುಂಬಿಕ ಕಲಹ : ವೃದ್ಧ ಅಪ್ಪನಿಂದ ಮಗನ ಹೆಂಡತಿಯ ಕೊಲೆ

ಆಗ್ರಾ: ಕೆಲ ದಿನಗಳ ಹಿಂದಷ್ಟೇ  ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಳಿಯನೋರ್ವ ಹೆಣ್ಣು ಕೊಟ್ಟ ಅತ್ತೆ ಮಾವನ ಮೇಲೆಯೇ ದಾಳಿ ಮಾಡಿ ಅತ್ತೆಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದಿದ್ದ ಭೀಕರ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಉತ್ತರಪ್ರದೇಶದಿಂದ ಇಂತಹದ್ದೇ ರೀತಿಯ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಾವನೋರ್ವ ತನ್ನ ಮಗನ ಹೆಂಡತಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ. ಘಟನೆಯ ಬಳಿಕ ಆರೋಪಿ ಮಾವ 62 ವರ್ಷದ ರಘುವೀರ್ ಸಿಂಗ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಉತ್ತರ ಪ್ರದೇಶದ ಆಗ್ರಾದ ಮಲ್ಲಿಕಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಪ್ರಿಯಾಂಕಾ ಸಿಂಗ್ ಕೊಲೆಯಾದ ಸೊಸೆಯಾಗಿದ್ದು, ಈಕೆಯ ಗಂಡ ಹಾಗೂ ಕೊಲೆ ಮಾಡಿದ ರಘುವೀರ್‌ ಸಿಂಗ್‌ನ ಪುತ್ರ ಗೌರವ್ ಸಿಂಗ್‌ ಫಾರುಕಾಬಾದ್‌ನಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ವೇಳೆ ಆತ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ರಘುವೀರ್ ಸಿಂಗ್ ಅವರಿಗೆ ಇನ್ನೋರ್ವ ಮಗನಿದ್ದು ಆತ ಇತ್ತೀಚೆಗೆ ತೀರಿಕೊಂಡಿದ್ದರು. ಆತನ ಸಾವಿನ ನಂತರ ಆತನ ವಿಧವೆ ಪತ್ನಿ ತನ್ನ ತಾಯಿ ಮನೆಗೆ ಹೋಗಿ ಅಲ್ಲೇ ವಾಸವಾಗಿದ್ದು, ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದಳು. ಹಿರಿಸೊಸೆ ಹಾಗೂ ಕಿರಿಸೊಸೆ ಇಬ್ಬರೂ ಒಂದೇ ಮನೆಯಲ್ಲಿ ಜೊತೆಯಾಗಿ ಬಾಳ್ವೆ ಮಾಡಬೇಕು ಎಂದು ಮಾವ ರಘುವೀರ್ ಸಿಂಗ್ ಬಯಸಿದ್ದರು. ಆದರೆ ಸೊಸೆಯರಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದೇ ಆಕೆ ಬಂದಾಗಲೆಲ್ಲಾ ಮನೆಯಲ್ಲಿ ಜಗಳಗಳಾಗುತ್ತಿತ್ತು. ಅದೇ ರೀತಿ ಸೋಮವಾರವೂ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಸೊಸೆಯರ ಜಗಳ ಬಿಡಿಸಲು ಹೋದ ಮಾವನನ್ನು ಕಿರಿ ಸೊಸೆ ಪ್ರಿಯಾಂಕಾ ನೆಲಕ್ಕೆ ತಳಿದ್ದು, ಅವರು ಕೆಳಗೆ ಬಿದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ಮನೆಯಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಸೊಸೆ ಪ್ರಿಯಾಂಕಾಳನ್ನು ಕೊಚ್ಚಿ ಹಾಕಿದ್ದಾರೆ ನಂತರ ರಕ್ತಸಿಕ್ತ ಕೈಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಡಿಸಿಪಿ ಸೋನಂ ಕುಮಾರ್ ಸಿಂಗ್ ಹೇಳಿದ್ದಾರೆ. 

ಆರೋಪಿ ರಘುವೀರ್ ಸಿಂಗ್ ಪುತ್ರ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆಯುವ ವೇಳೆ ಆತ ಫಾರುಖಾಬಾದ್‌ನಲ್ಲಿ ಕರ್ತವ್ಯದಲ್ಲಿದ್ದ, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಪ್ರಿಯಾಂಕಾಳ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ರಘುವೀರ್ ಹಾಗೂ ಕುಟುಂಬದ ಇತರ ಐವರ ಮೇಲೆ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಪ್ರಿಯಾಂಕಾಳ(Priyanka) ಗಂಡ ಗೌರವ್ ಸಿಂಗ್ ಹೆಸರೂ ಇದ್ದು ತನಿಖೆ ನಡೆಯುತ್ತಿದೆ ಎಂದು ಕಿರ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಉಪೇಂದ್ರ ಕುಮಾರ್ ಶ್ರೀವಾಸ್ತವ್ ಹೇಳಿದ್ದಾರೆ.